ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ

ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ ( Journalists Association )
ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು: ಕೆ.ವಿ. ಪ್ರಭಾಕರ್ ಭರವಸೆ ( Journalists Association )
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರು ಭರವಸೆ
  • ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಬಿಎ ಮುಖ್ಯ ಆಯುಕ್ತರ ಜೊತೆ ಮಾತನಾಡುತ್ತೇನೆ
  • ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಂದ ಹೇಳಿಕೆ
ಬೆಂಗಳೂರಿನ ನಗರ ಜಿಲ್ಲೆ ಪತ್ರಕರ್ತರ ಸಂಘದ ಕಚೇರಿಗೆ ನಿವೇಶನ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಬಿಎ ಮುಖ್ಯ ಆಯುಕ್ತರ ಜೊತೆ ಈ ಸಂಬಂಧ ಮಾತುಕತೆ ನಡೆಸಿ ನಿವೇಶನ ಮಂಜೂರು‌ ಮಾಡಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಭರವಸೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಭಾನುವಾರ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಏರ್ಪಡಿಸಿದ್ದ ಕೃತಜ್ಞತಾ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಬೆಂಗಳೂರು ನಗರ ಜಿಲ್ಲೆಯ ಸಂಘದ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯಿಂದ ಸಂಘಕ್ಕೆ ನಿವೇಶನ ಮಂಜೂರು ಮಾಡುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಕೆ.ವಿ.ಪ್ರಭಾಕರ್, ಜಿಲ್ಲಾ ಸಂಘಕ್ಕೆ ನಿವೇಶನ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯ ಕೋರುತ್ತಾ, ಬೆಂಗಳೂರು ನಗರ ಜಿಲ್ಲೆಯ ಸಂಘಕ್ಕೆ ಯಾವುದೇ ಗ್ರಹಣ ಹಿಡಿಯದೇ, ಎಲ್ಲರೂ ಒಗ್ಗಟ್ಟಾಗಿ ಸಂಘದ ಏಳ್ಗೆಗಾಗಿ ನೂತನ ಪದಾಧಿಕಾರಿಗಳು ಶ್ರಮಿಸಬೇಕು. ಕೆಯುಡಬ್ಲ್ಯುಜೆ ಸದಸ್ಯರ ಅನುಕೂಲಕ್ಕಾಗಿ ನಾನು ಕೂಡ ನನ್ನ ಕೈಲಾದ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿಯನ್ನು ಈ ಬಾರಿ ಸರ್ಕಾರ ಜಾರಿಗೆ ತಂದಿದ್ದೇವೆ ಎಂದರು.
ಹೊಸ ಪೀಳಿಗೆಯ ಪತ್ರಕರ್ತರಿಗೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿ ಕೆಯುಡಬ್ಲ್ಯುಜೆಯು ಸಮಾಜಕ್ಕೆ ಉತ್ತಮ ಪತ್ರಕರ್ತರನ್ನು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಮಾಜ ಮತ್ತು ಸರ್ಕಾರದ ಸೇತುವೆಯಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಾಗಿದೆ. ಪ್ರಸ್ತುತ ಊಹೆ ಮಾಡಿಕೊಂಡು ಬರೆಯುವ ಪ್ರವೃತ್ತಿಯೂ ಪತ್ರಕರ್ತರಲ್ಲಿ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಿಖರವಾಗಿ ಸುದ್ದಿಯನ್ನು ಗ್ರಹಿಸಿ ಬರೆಯಬೇಕು ಎಂದು ಪ್ರಭಾಕರ್ ಕರೆ ನೀಡಿದರು.
ಎಐ ಬಂದ ಮೇಲೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುದ್ದಿ ಬಿತ್ತರವಾಗುತ್ತಿದೆ. ಇದು ಸವಲೇ ಸರಿ. ಈ ಮಧ್ಯೆ ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ‌ ಎಂದರು.
ರಾಜ್ಯದಲ್ಲಿರುವ ವಸತಿ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಯೋಜನೆ ಅಥವಾ ಪತ್ರಕರ್ತರಿಗೆಂದೇ ನಿವೇಶನ ಅಥವಾ ಮನೆ ನೀಡುವ ಯೋಜನೆ ಜಾರಿಗೆ ತರುವ ಸಂಬಂಧ ಕೆಯುಡಬ್ಕ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರ್ ಜೊತೆ ಮಾತುಕತೆ ನಡೆಸಲಾಗುತ್ತಿದೆ.‌ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವುದಾಗಿ ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಅವರ ಮಾಧ್ಯಮ ಸಲಹೆಗಾರ ಲಕ್ಷೀನಾರಾಯಣ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2025-2028ರ ಅವಧಿಯ ಚುನಾವಣೆಯನ್ನು ಯಶಸ್ವಿಯಾಗಿ ಕೈಗೊಂಡ ವಿ.ನಂಜುಡಪ್ಪ ಅವರು ಮಾತನಾಡಿ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಉತ್ತಮವಾಗಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಎಂದು ಹಾರೈಸಿದರು. ಇದಕ್ಕೆ ಕೆಯುಡಬ್ಲ್ಯುಜೆ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಕೂಡ ದನಿಗೂಡಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ್, ಬೆಂಗಳೂರು ನಗರ ಜಿಲ್ಲೆಯ ಸಂಘ ಹಲವು ವರ್ಷಗಳಿಂದ ಸಮಸ್ಯೆಯಿತ್ತು. ಪತ್ರಕರ್ತರಲ್ಲದವರನ್ನು ಸಂಘದಿಂದ ದೂರ ಇಡಲು ಶುದ್ಧೀಕರಣ ಮಾಡಲು ಪ್ರಯತ್ನ ಶುರು ಮಾಡಿದೆವು. ಅದರಲ್ಲಿ ನಾವು ಯಶಸ್ವಿಯಾಯಿತು. ಕಳೆದ ಬಾರಿ ಸಂಘದ ಹೊಸ ಸದಸ್ಯತ್ವ ನೀಡುವ ಜವಾಬ್ದಾರಿಯನ್ನು ರಾಜ್ಯ ಘಟಕಕ್ಕೆ ನೀಡಲಾಗಿತ್ತು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಚುನಾವಣೆ ಘೋಷಣೆಯಾದಾಗ ಹೆಚ್ಚಿನ ಮಂದಿ ಸ್ಪರ್ಧೆಗೆ ಹೆಚ್ಚಿನವರು ಮುಂದೆ ಬಂದರು. ನಗರ ಜಿಲ್ಲೆಯಲ್ಲಿ ಈ ಬಾರಿ ನೂತನ ಸದೃಢ ಸಮಿತಿ ಆಯ್ಕೆಯಾಗಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲೆ ನೂತನ ಅಧ್ಯಕ್ಷ ಸೋಮಶೇಖರ್ ಗಾಂಧಿ ಸಂಘಕ್ಕಾಗಿ ಸಾಕಷ್ಟು ಬದ್ಧತೆಯಿದೆ.‌ ಅವರ ಜೊತೆ ಉತ್ತಮ‌ ತಂಡ ಆಯ್ಕೆಯಾಗಿದೆ.‌ ಗೆದ್ದವರು ಹಮ್ಮು-ಬಿಮ್ಮು ತೋರದೆ ಚುನಾವಣೆಯಲ್ಲಿ ಸೋತವರನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕು ಎಂದು ಶಿವಾನಂದ್ ತಗಡೂರ್ ಕಿವಿಮಾತು ಹೇಳಿದರು.
ಈ ಬಾರಿಯ ಬಜೆಟ್ ನಲ್ಲಿ ಪತ್ರಕರ್ತರಿಗಾಗಿ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆಯಾಗುತ್ತೆ ಎಂಬ ನಿರೀಕ್ಷೆ ಸುಳ್ಳಾಗಿದೆ. ವಾರ್ತಾ ಇಲಾಖೆಯ ಮಾಧ್ಯಮ ಮಾನ್ಯತೆ ಪಟ್ಟಿಯಲ್ಲಿ ಇಲ್ಲದವರಿಗೂ ಮುಖ್ಯಮಂತ್ರಿಗಳ ಮಾಧ್ಯಮ‌ ಸಂಜೀವಿನಿ ಯೋಜನೆಗೆ ಸೇರ್ಪಡೆಗೊಳಿಸಲು ಕಾನೂನು ಸರಳೀಕರಣಗೊಳಿಸಬೇಕು, ವಸತಿ ಇಲಾಖೆಯಲ್ಲಿ ಪತ್ರಕರ್ತರಿಗೆ ನಿವೇಶನ ಅಥವಾ ಮನೆ ನೀಡಲು ಶೇ.5ರಷ್ಟು ಪತ್ರಕರ್ತರಿಗೆ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವಂತೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹಾಗೂ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀ ನಾರಾಯಣ ಅವರನ್ನು ಒತ್ತಾಯಿಸಿದರು.
ಕೃತಜ್ಞತಾ ಸಮರ್ಪಣಾ ಸಮಾರಂಭ ಹಾಗೂ ಪದಗ್ರಹಣ ನಂತರ ಬೆಂಗಳೂರಿನ ನಗರ ಜಿಲ್ಲೆ ಪತ್ರಕರ್ತರ ಸಂಘದ ಮೊದಲ ಸಭೆ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ ಗಾಂಧಿ ನೇತೃತ್ವದಲ್ಲಿ ನಡೆಯಿತು.‌ ಇದಕ್ಕೂ ಮುನ್ನ ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ, ಕೆಯುಡಬ್ಲ್ಯುಜೆ ನಡೆದು ಬಂದ ಹಾದಿ ಹಾಗೂ ಬೆಂಗಳೂರು ನಗರ ಜಿಲ್ಲಾ ಸಂಘಕ್ಕೆ ಸರ್ಕಾರದಿಂದ ನಿವೇಶನ ಅಥವಾ ಕಟ್ಟಡ ಒದಗಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಕೆಯುಡಬ್ಲ್ಯುಜೆ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಈ ಬಾರಿಯ ನೂತನ ಸದಸ್ಯತ್ವ ಹಾಗೂ‌ ಸದಸ್ಯತ್ವ ನವೀಕರಣಕ್ಕೆ 20-25 ನಿಬಂಧನೆಗಳನ್ನು ಸಂಘವು ಹಾಕಿದೆ. ಮೊದಲು ಸದಸ್ಯದ ಅರ್ಜಿಯನ್ನು ಪರಿಶೀಲಿಸಿ, ಅರ್ಹತೆಯಿದ್ದವರಿಂದ ನಂತರ ನಗರದ ಪರಿಶೀಲನಾ ಸಮಿತಿಯವರು ನಗದು ಅಥವಾ ಡಿಡಿಗಳನ್ನು ಸಂಘದ ಹೆಸರಿಗೆ ಪಡೆದುಕೊಳ್ಳಿ ಎಂದು ಅವರು ಹೇಳಿದರು. ಅದೇ ರೀತಿ ಮಾ.28 ಹಾಗೂ 29 ಕೆಯುಡಬ್ಲ್ಯುಜೆ ವಾರ್ಷಿಕ ಸಮ್ಮೇಳನದ ಕುರಿತು ಮಾಹಿತಿ‌ ನೀಡಿದರು. ಮಾ.29 ರಂದು 92ನೇ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಐಎಫ್ ಡಬ್ಲ್ಯುಜೆ ರಾಷ್ಟ್ರಾಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಅಧ್ಯಕ್ಷರಾದ ರಮೇಶ್ ಪಾಳ್ಯ, ಬೆಂಗಳೂರು ಪತ್ರಿಕಾ ಛಾಯಾಗ್ರಹಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್, ಕೆಯುಡಬ್ಲ್ಯುಜೆ ಖಜಾಂಚಿ ವಾಸುದೇವ ಹೊಳ್ಳ ಹಾಗೂ‌ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net