ಪರೀಕ್ಷಾ ಅಕ್ರಮ ತಡೆಗೆ ಎಐ!

 ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Published on
ಬೆಂಗಳೂರು: ರಾಜ್ಯ ಸರ್ಕಾರದ ಖಾಲಿ ಹುದ್ದೆಗಳ ನೇಮಕಾತಿ ಮತ್ತು ಶಿಕ್ಷಣ ಸಂಸ್ಥೆಗಳ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮತ್ತು ಗೌಪ್ಯತೆ ಕಾಯ್ದುಕೊಳ್ಳಲು ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ನೇಮಕಾತಿ ಮತ್ತು ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ತಡೆಯಲು ಎಐ ತಂತ್ರಜ್ಞಾನದ ಮೊರೆ ಹೋಗಿದೆ.
ರಾಜ್ಯದಲ್ಲಿ ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಹಾಗೂ ಸ್ಟಾರ್ಟಪ್‌ನಲ್ಲಿ ಎಐ ಬಳಕೆ ಹೆಚ್ಚಿಸಲು ಸಹಭಾಗಿತ್ವ ಕುರಿತು ಆಂಥ್ರೋಪಿಕ್ ಸಂಸ್ಥೆ ನಿಯೋಗದ ಜತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಗುರುವಾರ ಚರ್ಚೆ ನಡೆಸಿದರು. ಜವಾಬ್ದಾರಿಯುತ ಬಳಕೆ, ಡೇಟಾ ಗೌಪ್ಯತೆ ಮತ್ತು ಡೇಟಾ ಸಾರ್ವಭೌಮತ್ವ ಸಾಧಿಸುವ ಮೂಲಕ ಸರ್ಕಾರ ಹಾಗೂ ಉದ್ಯಮಗಳಿಗೆ ಎಐ ಪ್ರಯೋಜನಕಾರಿ ಅಳವಡಿಕೆ ಕುರಿತು ಭರವಸೆ ಹುಟ್ಟಿಸುವ ಬಗ್ಗೆ ಚರ್ಚಿಸಲಾಯಿತು.
ಸರ್ಕಾರದ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಪಾರದರ್ಶಕತೆ, ಸುರಕ್ಷತೆ ಮತ್ತು ಗೌಪ್ಯತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಹೇಗೆ ನೆರವಾಗುತ್ತದೆ ಎಂಬುದರ ಬಗ್ಗೆ ನಿಯೋಗದೊಂದಿಗೆ ಮುಖ್ಯಮಂತ್ರಿ ತಾಂತ್ರಿಕ ಸಲಹೆ ಕೋರಿದರು.
ಪ್ರಸ್ತಾವಿತ ಎಐ ವಿಶ್ವವಿದ್ಯಾಲಯ, ಬೃಹತ್ ಮಟ್ಟದ ಕೌಶಲಾಭಿವೃದ್ಧಿ ಯೋಜನೆಗಳು ಮತ್ತು ಡೀಪ್- ಟೆಕ್ ಅನ್ವೇಷಣೆಗಳಿಗೆ ನೀಡುವ ಬೆಂಬಲವನ್ನು ಒಳಗೊಂಡಂತೆ ಸಮಗ್ರ ಎಐ ಪರಿಸರ ವ್ಯವಸ್ಥೆ ನಿರ್ಮಿಸುವ ಕರ್ನಾಟಕದ ದೃಷ್ಟಿಕೋನವನ್ನು ಡಿ.ಕೆ. ಶಿವಕುಮಾರ್ ವಿವರಿಸಿದರು.
ದೇಶದಲ್ಲೇ ಅತಿ ದೊಡ್ಡ ಎಐ ಪ್ರಮಾಣೀಕೃತ ಪ್ರತಿಭಾವಂತರನ್ನು ರೂಪಿಸಲು ಕ್ಲಾಡ್ ಸರ್ಟಿಫಿಕೇಶನ್ ಸೇರಿ ಎಐ-ಸಂಬಂಧಿತ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಪರಿಚಯಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಹಿರಿಯ ಐಎಎಸ್ ಅಧಿಕಾರಿಗಳಾದ ಡಾ.ಎನ್. ಮಂಜುಳಾ, ಮುನೀಶ್ ಮೌದ್ಗಿಲ್ ಹಾಗೂ ಸಿಎಂ ಹಣಕಾಸು ಸಲಹೆಗಾರ ಎಲ್.ಕೆ.ಅತೀಕ್, ಆಂಥ್ರೋಪಿಕ್ ಸಂಸ್ಥೆಯ ಪರವಾಗಿ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟೋ, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಸಿಯೌರಿ, ಭಾರತದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಷ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net