ಸರ್ಕಾರಿ ಹೈಸ್ಕೂಲ್, ಪಿಯು ವಿದ್ಯಾರ್ಥಿಗಳಿಗೆ ಎಐ ಶಿಕ್ಷಣ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ಸರ್ಕಾರಿ ಪ್ರೌಢ ಶಾಲೆ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 12.28 ಲಕ್ಷ ವಿದ್ಯಾರ್ಥಿಗಳಿಗೆ ಇದರ ಸೌಲಭ್ಯ ದೊರೆಯಲಿದೆ.
  • ಎಐ ಮಾಡ್ಯೂಲ್‌ನಲ್ಲಿ ವಿದ್ಯಾರ್ಥಿಗಳು ಆರಂಭಿಕ ಎಐ ಕಲಿಯಲಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ.
  • 2026-27ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿದೆ. ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಐಐಟಿ ಧಾರವಾಡ ಸಹಯೋಗ
ಎನ್.ಎಲ್. ಶಿವಮಾದು
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಾಜರಾತಿ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಿತ, ಇಂಗ್ಲಿಷ್ ಮತ್ತು ಕನ್ನಡ ಕಲಿಸಲು ಈಗಾಗಲೇ ‘ಕಲಿಕಾ ದೀಪ ಯೋಜನೆ’ ಯೋಜನೆ ಮೂಲಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷ (2026-27)ದಿಂದ ಪ್ರೌಢ ಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಎಐ ಕಲಿಸುವುದಾಗಿ ಘೋಷಿಸಿದೆ.
ಶಾಲಾ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ವಿದ್ಯಾರ್ಥಿ ಕೇಂದ್ರಿತ ಯೋಜನೆಗಳಲ್ಲಿ ಬದಲಾವಣೆಯನ್ನು ತರುತ್ತಿರುವ ಶಿಕ್ಷಣ ಇಲಾಖೆಯು, ಕಲಿಕಾ ದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ನೀಡುವತ್ತ ಆಲೋಚನೆ ಮಾಡುತ್ತಿದೆ. ಖಾಸಗಿ ಶಾಲೆಗಳಿಗೆ ಸಮನಾಗಿ ತಮ್ಮ ಮಕ್ಕಳಿಗೂ ಗುಣಾತ್ಮಕ ಶಿಕ್ಷಣದ ಜತೆಗೆ ತಂತ್ರಜ್ಞಾನದಲ್ಲಿಯೂ ಮುಂಚೂಣಿಯಲ್ಲಿರಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ.
ಆಧುನಿಕ ಜಗತ್ತನ್ನು ಆಳುತ್ತಿರುವ ಎಐ ಅನ್ನು ಶಾಲಾ ಹಂತದಲ್ಲಿಯೇ ತಿಳಿದರೆ, ಮುಂದಿನ ದಿನಗಳಲ್ಲಿ ಮಕ್ಕಳು ಅದೇ ಮಾರ್ಗದಲ್ಲಿ ಸಾಗಲು ದಾರಿ ಸುಲಭವಾಗಲಿದೆ ಎಂಬುದು ಇಲಾಖೆಯು ಮುಂದಾಲೋಚನೆಯಾಗಿದೆ.

ಡಿಜಿಟಲ್ ಟ್ಯೂಟರ್‌ನಿಂದ ಸ್ವಯಂ ಕಲಿಕೆ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ತನ್ನ ದೀಕ್ಷಾ ವೇದಿಕೆಯಲ್ಲಿ ದೇಶಾದ್ಯಂತ ಇರುವ ಸರ್ಕಾರಿ ಶಾಲಾ ಮಕ್ಕಳಿಗಾಗಿ ಎಐ ಮಾಡ್ಯೂಲ್‌ನ ಉಚಿತ ಆೃಪ್/ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸೇರಿ ದೇಶದ 22 ಭಾಷೆಗಳಲ್ಲಿ ಈ ಆೃಪ್/ಪೋರ್ಟಲ್ ಲಭ್ಯವಿರಲಿದೆ. ಈ ಡಿಜಿಟಲ್ ಟ್ಯೂಟರ್ ಅನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತಿದೆ. ಎಐ ಮಾಡ್ಯೂಲ್‌ನಲ್ಲಿ ವಿದ್ಯಾರ್ಥಿಗಳು ಆರಂಭಿಕ ಎಐ ಕಲಿಯಲಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಬಳಿಕ ಕಲಿಕೆಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.

12.28 ಲಕ್ಷ ಮಕ್ಕಳಿಗೆ ಅನುಕೂಲ

ರಾಜ್ಯದ ಸರ್ಕಾರಿ ಪ್ರೌಢ ಶಾಲೆ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 12.28 ಲಕ್ಷ ವಿದ್ಯಾರ್ಥಿಗಳಿಗೆ ಇದರ ಸೌಲಭ್ಯ ದೊರೆಯಲಿದೆ. ಆರಂಭಿಕ ಹಂತದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಎಲ್ಲ ಮಕ್ಕಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಐಐಟಿ ಧಾರವಾಡ ಸಹಯೋಗ, 5 ಕೋಟಿ ರೂ. ಮೀಸಲು

ಶಾಲಾ ಮಕ್ಕಳಿಗೆ ಎಐ ಕಲಿಸುವುದಕ್ಕಾಗಿ 2026-27ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿದೆ. ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಐಐಟಿ ಧಾರವಾಡ ಸಹಯೋಗ ಪಡೆಯಲಾಗುತ್ತಿದೆ. ಅಲ್ಲಿನ ತಂತ್ರಜ್ಞರು ಶಾಲಾ ಮಕ್ಕಳಿಗೆ ಅನುಕೂಲವಾಗುವ ಮತ್ತು ವಯಸ್ಸಿಗೆ ಅನುಗುಣವಾಗಿ ಯಾವುದನ್ನು ಕಲಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.

ಏನೆಲ್ಲ ವಿಷಯಗಳು ಇರಲಿದೆ?

ಶಾಲಾ ಹಂತದಲ್ಲಿ ಆರಂಭಿಕ ಹಂತದ ಎಐ ಶಿಕ್ಷಣವನ್ನು ಕಲಿಸಲಾಗುತ್ತದೆ. ಪ್ರತಿ ದಿನವ ಜೀವನದಲ್ಲಿ ಎಐ ಹೇಗೆ ಬಳಸಬಹುದು, ಪ್ರಾಬ್ಲಂ ಸಾಲ್ವಿಂಗ್, ಅಲ್ಗಾರಿದಂ ವಿದೌಟ್ ಕೋಡಿಂಗ್ ಸೇರಿ ಹಲವು ವಿಷಯಗಳನ್ನು ಕಲಿಯಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪಠ್ಯಕ್ರಮವನ್ನು ರಚಿಸಲಾಗುತ್ತದೆ.

ಕಲಿಕಾದೀಪದಲ್ಲಿ ಪಳಗಿರುವ ವಿದ್ಯಾರ್ಥಿಗಳು

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4ರಿಂದ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಗಣಿತ ವಿಷಯದ ಸಾಮರ್ಥ್ಯ ಹೆಚ್ಚಿಸಲು ಹಾಗೂ ಇಂಗ್ಲಿಷ್ ಮತ್ತು ಕನ್ನಡವನ್ನು ಆತ್ಮವಿಶ್ವಾಸದಿಂದ ಓದಲು ‘ಕಲಿಕಾ ದೀಪ’ ಯೋಜನೆಯನ್ನು 1,145 ಶಾಲೆಗಳಲ್ಲಿ ಕಲಿಸಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಏಕ್ ಸ್ಟೆಪ್ ೌಂಡೇಷನ್ ಸಹಯೋಗದಲ್ಲಿ ಕಲಿಕಾ ದೀಪ ಕಾರ್ಯಕ್ರಮವನ್ನು 2024-25ರಲ್ಲಿಯೇ ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ತೊಡಕುಗಳು ಕಡಿಮೆಯಾಗುತ್ತಿದ್ದು, ಅವರ ಕಲಿಕಾ ಕೊರತೆಗಳು ನೀಗುತ್ತಿವೆ. ಈ ತಂತ್ರಜ್ಞಾನವು ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತೆಯನ್ನು ಉತ್ತಮಗೊಳಿಸಿ ಅವರಲ್ಲಿ ಇತರ ವಿಷಯಗಳ ಕಲಿಕೆಗೂ ಸಹಕಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವಿದ್ಯಾರ್ಥಿಗಳು ಈಗ ಪ್ರೌಢ ಶಾಲೆಗಳಲ್ಲಿಯೂ ಎಐ ಕಲಿಯಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net