ನ್ಯಾಯಾಂಗ ಕ್ಷೇತ್ರದಲ್ಲಿ ಎಐ ಅಳವಡಿಸಿಕೊಳ್ಳಿ-Adopt AI

ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾ.ಗೋಪಾಲಗೌಡ
ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾ.ಗೋಪಾಲಗೌಡ
Published on
ಬೆಂಗಳೂರು:ನ್ಯಾಯಾಂಗ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳಡಿಸಿಕೊಂಡು ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡುವ ಅವಶ್ಯಕತೆ ಇದೆ ಎಂದು ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾ.ಗೋಪಾಲಗೌಡ ಸಲಹೆ ನೀಡಿದ್ದಾರೆ.
ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದರು.
ಕಾನೂನು,ನಿಯಮಗಳು ಮಾನವೀಯತೆ ಆಧಾರದ ಮೇಲೆ ನಿಲ್ಲಬೇಕು. ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯ ಇದೆ. ಸಮಾಜದ ನಗ್ನ ಸತ್ಯ ಅರಿತು ಮಾನವೀಯತೆ ಮೈಗೂಡಿಸಿಕೊಂಡು ಸಂಕಷ್ಟಗಳಿಗೆ ನ್ಯಾಯ ಕಲ್ಪಿಸಿಕೊಟ್ಟಾಗ ಮಾತ್ರ ಜನರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಮೂಡಲಿದೆ ಎಂದರು.
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ವಲಾನಂದನಾಥ ಸ್ವಾಮೀಜಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಅಲ್ಪಮಟ್ಟಿಗೆ ಸಮಸ್ಯೆ ಇರಬಹುದು. ಅದರೆ, ಅದನ್ನೇ ದೊಡ್ಡದು ಮಾಡಿ ಜನರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸ ಕಡಿಮೆ ಮಾಡುವ ಅಗತ್ಯ ಇಲ್ಲ. ತಂತ್ರಜ್ಞಾನ ಬಂದಿದೆ ಎಂಬ ಕಾರಣಕ್ಕೆ ಮಾನವೀಯತೆ ಬಿಟ್ಟು ಕೆಲಸ ಮಾಡುವುದು ಬೇಡ. ಎಐ ಬಳಕೆ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ನ್ಯಾಯ ಕಲ್ಪಿಸಿಕೊಡುವಂತಾಗಲಿ ಎಂದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ತಂತ್ರಜ್ಞಾನ ವೇಗಗತಿಯಲ್ಲಿ ಬೆಳವಣಿಗೆ ಸಾಧಿಸಿದಂತೆ ನಮ್ಮ ವೃತ್ತಿಯಲ್ಲಿ ಅದನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆಯನ್ನು ವಕೀಲ ವೃತ್ತಿಯಲ್ಲಿ ಅಳವಡಿಸಿಕೊಳ್ಳುತ್ತಿರುವುದು ಪ್ರಶಂಸನೀಯ. ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಂದೇ ಭಾರತಂ ಫೌಂಡೇಷನ್ ಸಂಸ್ಥಾಪಕ ಬಿಜ್ಜವಾರ ಎಚ್.ಲೋಕೇಶ್ ಮತ್ತು ಓಮಿಲೋಸ್ ಸೆಲ್ಯೂಷನ್ಸ್ ಪ್ರೈ.ಲಿ.ನ ಸುರೇಶ್ ಜಯರಾಮ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net