ಪ್ರಶಾಂತ ಮನಸ್ಸಿನಿಂದ ಸಾಧನೆ ಸಾಧ್ಯ

ಲಬುರಗಿ ಸರ್ವಜ್ಞ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮಕ್ಕೆ ಖ್ಯಾತ ಮನೋವೈದ್ಯ ಡಾ.ಸಿ.ಆರ್​.ಚಂದ್ರಶೇಖರ ಚಾಲನೆ ನೀಡಿದರು. ಪ್ರೊ.ಚನ್ನಾರಡ್ಡಿ ಪಾಟೀಲ್​, ಡಾ.ಆರ್​.ವೆಂಕಟರಡ್ಡಿ, ಪ್ರಶಾಂತ್​ ಕುಲಕರ್ಣಿ, ವಿನುತ ಆರ್​.ಬಿ., ಪ್ರಭುಗೌಡ ಸಿದ್ದಾರಡ್ಡಿ, ಎಸ್​.ಎಸ್​.ಹಿರೇಮಠ್​ ಇತರರಿದ್ದರು.
ಲಬುರಗಿ ಸರ್ವಜ್ಞ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮಕ್ಕೆ ಖ್ಯಾತ ಮನೋವೈದ್ಯ ಡಾ.ಸಿ.ಆರ್​.ಚಂದ್ರಶೇಖರ ಚಾಲನೆ ನೀಡಿದರು. ಪ್ರೊ.ಚನ್ನಾರಡ್ಡಿ ಪಾಟೀಲ್​, ಡಾ.ಆರ್​.ವೆಂಕಟರಡ್ಡಿ, ಪ್ರಶಾಂತ್​ ಕುಲಕರ್ಣಿ, ವಿನುತ ಆರ್​.ಬಿ., ಪ್ರಭುಗೌಡ ಸಿದ್ದಾರಡ್ಡಿ, ಎಸ್​.ಎಸ್​.ಹಿರೇಮಠ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಮನೋವೈದ್ಯ ಡಾ.ಸಿ.ಆರ್​.ಚಂದ್ರಶೇಖರ ಹೇಳಿಕೆ
  • ಸರ್ವಜ್ಞ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ
ಕಲಬುರಗಿ: ಮನಸ್ಸು ಪ್ರಶಾಂತವಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಆಗಾಗ ಸಮಾಲೋಚಕರೊಡನೆ ಚರ್ಚಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಧೈರ್ಯ, ಸಹನೆ, ಸ್ವಾವಲಂಬಿ, ನೆಮ್ಮದಿಯಿಂದ ಬದುಕಬೇಕು ಎಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್​.ಚಂದ್ರಶೇಖರ ಹೇಳಿದರು.
ನಗರದ ಸರ್ವ ಮತ್ತು ಜಸ್ಟಿಸ್​ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕುರಿತ ಪ್ರೇರಣಾ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಕಾರಾತ್ಮಕ ಚಿಂತನೆ ಬಿಡಿ
ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬದುಕು ಸುಂದರಗೊಳಿಸಿಕೊಳ್ಳಬೇಕು. ಸರಿಯಾಗಿ ನಿದ್ದೆ ಮಾಡದಿದ್ದರೆ ಮನಸ್ಸು ಪ್ರಕ್ಷುಬ್ಧವಾಗಿರುತ್ತದೆ. ಪೌಷ್ಠಿಕ ಆಹಾರದ ಕೊರತೆ, ಹಣಕಾಸಿನ ಏರುಪೇರು, ಸಂಬಂಧಗಳಲ್ಲಿ ಒಡಕು, ಉದ್ಯೋಗದ ಸಮಸ್ಯೆ ಕಾಡುತ್ತವೆ. ಇದಕ್ಕೆ ನಮ್ಮಲ್ಲಿರುವ ಕೀಳರಿಮೆ, ನಕಾರಾತ್ಮಕ ಆಲೋಚನೆ, ಒಂಟಿತನ, ಬೇರೆಯವರ ಆಸರೆ ಇಲ್ಲದೆ ಇರುವಿಕೆ, ಜ್ಞಾನ ತಿಳಿವಳಿಕೆ ಇಲ್ಲದಿರುವುದು. ಈ ಸಂದರ್ಭದಲ್ಲಿ ನಮ್ಮ ಮನಸ್ಸು ಕೋಪ, ದು@ಖ, ಭಯ, ತಪ್ಪಿತಸ್ಥ ಭಾವನೆಯಿಂದ ಕೂಡಿರುತ್ತದೆ. ದೇಹದಲ್ಲಿ ಹಾಮೋರ್ನುಗಳು ಏರುಪೇರಾಗಿ ಚಿಂತಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಮಾಧಾನವಿಲ್ಲದ ಮನಸ್ಸಿನಿಂದ ರಕ್ತದ ಒತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಶ್ವಾಸಕೋಶಗಳಲ್ಲಿ ಉಸಿರಾಟದ ತೊಂದರೆ, ಕೀಲುನೋವು ಕಾಣಿಸಿಕೊಳ್ಳುತ್ತವೆ ಎಂದರು.
ಮಾನಸಿಕ ಆರೋಗ್ಯ ಹದಗೆಡಲು ಒತ್ತಡದ ಜೀವನ, ಚಿಂತೆ, ವೈಯಕ್ತಿಕ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಇತರ ಕಾರಣಗಳಿವೆ. ಎಲ್ಲಾ ವರ್ಗದ ಜನರು ತಮ್ಮ ಮಾನಸಿಕ ನೆಮ್ಮದಿ ಕಳೆದುಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಅವರಿಗೆ ಸಾಂತ್ವನ ಹೇಳುವ, ಕೌನ್ಸೆಲಿಂಗ್​ ಮೂಲಕ ಅವರ ಮಾನಸಿಕ ಆರೋಗ್ಯ ಉತ್ತಮವಾಗಿರುವಂತೆ ಮಾಡಬೇಕಾಗಿದೆ ಎಂದರು.
ಆಪ್ತ ಸಲಹೆ ಅಗತ್ಯ
ನಿವೃತ್ತ ಪ್ರಾಧ್ಯಾಪಕ ಡಾ.ಆರ್​.ವೆಂಕಟರೆಡ್ಡಿ ಮಾತನಾಡಿ, ಆಪ್ತ ಸಲಹೆ ಇದು ಆತ್ಮೀಯವಾಗಿರುತ್ತದೆ. ಆಪ್ತ ಸಮಾಲೋಚಕರು ಯಾವುದೇ ಪೂರ್ವಾಗ್ರಹವಿಲ್ಲದೆ ಸಲಹೆ ನೀಡುವರು. ಓದುವ ವಿಧಾನ, ಜೀವನ ಶೈಲಿ ನೆಮ್ಮದಿಯ ಬದುಕಿಗೆ ಬೇಕಾದ ಅಂಶಗಳನ್ನು ತಿಳಿಸುವರು. ಇದರಿಂದ ಮಕ್ಕಳಲ್ಲಿ ಹೊಸ ಆಲೋಚನೆಗಳು ಬಂದು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಕೌನ್ಸೆಲಿಂಗ್​ನಲ್ಲಿ ವ್ಯಕ್ತಿಗಳು ಸಮಾಜದಲ್ಲಿ ಜನರೊಂದಿಗೆ ಹೇಗೆ ವರ್ತಿಸಬೇಕೆಂದು ಸಲಹೆ ನೀಡುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್​ ಮಾತನಾಡಿ, ಇಂದು ನಮ್ಮ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದಿದ ಮಕ್ಕಳು ನಮ್ಮ ಕಾಲೇಜಿಗೆ ಬಂದು ಪಿಯುಸಿಯಲ್ಲಿ ಹೆಚ್ಚು ಅಂಕ, ರ್ಯಾಂಕ್​ಗಳನ್ನು ಪಡೆಯುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಡಾ.ಸಿ.ಆರ್​.ಚಂದ್ರಶೇಖರ್​ ಪ್ರೇರಣೆ ಇದಕ್ಕೆ ಕಾರಣ. ವ್ಯಕ್ತಿತ್ವ ವಿಕಾಸಕ್ಕಾಗಿ ನೀಡುತ್ತಿರುವ ಪ್ರೇರಣಾ ಉಪನ್ಯಾಸ, ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಕೌನ್ಸೆಲಿಂಗ್​ ಮತ್ತು ನ್ಯಾ.ಡಾ.ಶಿವರಾಜ ಪಾಟೀಲರ ಜೀವನ ಅನುಭವದ ನುಡಿಮುತ್ತುಗಳನ್ನು ಓದಿ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಮತ್ತು ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ ಎಂದರು.
ಮಕ್ಕಳು ಸಾಧನೆ ಮಾಡಬೇಕೆಂಬ ಗುರಿಯೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಆ ಸಾಧನೆಗೆ ಯಾವುದೇ ಸಮಸ್ಯೆ ಅಡ್ಡಿಯಾಗದು. ಸಮಸ್ಯೆ ಎದುರಿಸುವ ಶಕ್ತಿ ಬೆಳಸಿಕೊಳ್ಳಬೇಕು. ಶ್ರೇಷ್ಠ ಸಾಧಕ, ಉತ್ತಮ ನಾಗರಿಕರಾಗಿ ಹೊರ ಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಪ್ರಶಾಂತ್​ ಕುಲಕರ್ಣಿ, ವಿನುತ ಆರ್​.ಬಿ., ಪ್ರಭುಗೌಡ ಸಿದ್ದಾರಡ್ಡಿ, ಪ್ರಭುದೇವ ಎಂ.ಎಸ್​., ಕರುಣೇಶ್​ ಹಿರೇಮಠ್​, ಗುರುರಾಜ್​ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
"

ವಿದ್ಯಾರ್ಥಿಗಳು ಅವಶ್ಯಕತೆಗಿಂತ ಹೆಚ್ಚು ಮೊಬೈಲ್​ ಬಳಕೆ ಮಾಡಬಾರದು. ಮೊಬೈಲ್​ ಆಪ್ತಮಿತ್ರ, ಆದರೆ ಇಂದು ಅತಿಯಾದ ಬಳಕೆಯಿಂದ ಆಪ್ತ ಶತ್ರುವಾಗಿ ಕಾಡುತ್ತಿದೆ. ಮೊಬೈಲ್​ನಲ್ಲಿ ಇಂಪಾದ ಸಂಗೀತ, ಪ್ರವಚನ ಕೇಳಿ ಆನಂದಿಸಬೇಕು. ಆದರೆ ಅತಿಬಳಕೆ ಆರೋಗ್ಯಕ್ಕೆ ಮಾರಕ.

— ಪದ್ಮಶ್ರೀ ಡಾ.ಸಿ.ಆರ್​.ಚಂದ್ರಶೇಖರ, ಖ್ಯಾತ ಮನೋವೈದ್ಯರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net