ಕಲಬುರಗಿ: ಶ್ವಾಸಕೋಶದ ಅಲರ್ಜಿ ಮತ್ತು ಅಸ್ತಮಾದಂತಹ ಸಮಸ್ಯೆ ಹೋಗಲಾಡಿಸಲು ರೋಗಿಯ ವೈದ್ಯಕಿಯ ಇತಿಹಾಸ ಮತ್ತು ಅಲರ್ಜಿ ನಿಖರ ತಪಾಸಣೆ ಅತ್ಯಂತ ಪ್ರಮುಖವಾಗಿದೆ ಎಂದು ಎಫ್ಸಿಜಿಪಿ, ಖ್ಯಾತ ವೈದ್ಯ ಡಾ.ಗೌತಮ ಮೋದಿ ಹೇಳಿದರು.
ಕಲಬುರಗಿ ವೈದ್ಯಕಿಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯ 10ನೇ ಮಹಡಿ ಸಭಾಂಗಣದಲ್ಲಿ ಕಿವಿ, ಮೂಗು ಮತ್ತು ಗಂಟಲು ವಿಭಾಗ ಹಾಗೂ ಶ್ವಾಸಕೋಶ ವೈದ್ಯಕಿಯ ವಿಭಾಗದ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ಬಹುಶಾಖಾ ವೈಜ್ಞಾನಿಕ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ವೈದ್ಯರು ರೋಗಿ ಇತಿಹಾಸ ತಿಳಿಯುವುದು ರೋಗರ್ನಿಣಯದ ಶೇ.80 ಪೂರ್ಣಗೊಳಿಸುತ್ತದೆ. ರೋಗಲಕ್ಷಣ ಹೇಗೆ ಮತ್ತು ಯಾವಾಗ ಪ್ರಾರಂಭವಾದವು ಎಂಬುದನ್ನು ಅರಿಯುವುದು ಬಹುಮುಖ್ಯ. ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತ ಇಮ್ಯುನೋಥೆರಪಿ ಮತ್ತು ಚಿಕಿತ್ಸೆ ನೀಡುವುದರಿಂದ ಸಮಸ್ಯೆಯನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಬಹುದು ಎಂದು ಹೇಳಿದರು.
ಔಷಧೀಯ ಸೇರಿ ವಿವಿಧ ರೀತಿಯ ಅಲರ್ಜಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಚಿಕಿತ್ಸೆ ನೀಡುವ ಮುನ್ನ ರೋಗಿ ಆರೋಗ್ಯದ ಹಳೆಯ ಸಮಸ್ಯೆ ಹಾಗೂ ಬಾಲ್ಯದ ಆಸ್ತಮಾ ಇತಿಹಾಸ ವಿವರವಾಗಿ ಆಲಿಸುವುದು ರೋಗರ್ನಿಣಯಕ್ಕೆ ಸಹಾಯಕಾರಿ. ಅಲರ್ಜಿನ್ ಪ್ರೊವೊಕೇಶನ್ ಟೆಸ್ಟ್ ಮೂಲಕ ನಿಖರವಾದ ರೋಗಕಾರಕ ಗುರುತಿಸಿ ಆಧಾರಿತ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಶ್ವಾಸಕೋಶ ಮತ್ತು ಉಸಿರಾಟದ ಅಲರ್ಜಿ ಪತ್ತೆಗೆ ಸ್ಕಿನ್ ಪ್ರಿಕ್ ಟೆಸ್ಟ್ ಅತ್ಯಂತ ವಿಶ್ವಾಸಾರ್ಹ ಮತ್ತು ಗೋಲ್ಡ್ ಸ್ಟಾ$್ಯಂಡರ್ಡ್ ಪರೀೆಯಾಗಿದೆ. ಆಹಾರ ಅಲರ್ಜಿ ಪತ್ತೆಗೆ ಪ್ರಿಕ್&ಟು&ಪ್ರಿಕ್ ವಿಧಾನ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಜಿಮ್ಸ್ ಇಎನ್ಟಿ ವಿಭಾಗದ ಮುಖ್ಯಸ್ಥೆ ಡಾ.ರೇಣುಕಾ ಮೇಳಕುಂದಿ ಮಾತನಾಡಿ, ಅಲರ್ಜಿ ಎನ್ನುವುದು ಒಂದು ಅಂಗಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಅದು ಇಡೀ ಶರೀರದ ಮೇಲೆ ಪರಿಣಾಮ ಬೀರುವ ವೈದ್ಯಕಿಯ ಸ್ಥಿತಿ. ಹೀಗಾಗಿ ನಿಖರ ಪತ್ತೆ ಮತ್ತು ಚಿಕಿತ್ಸೆಗೆ ವಿವಿಧ ವಿಭಾಗಗಳ ವೈದ್ಯರನ್ನು ಒಳಗೊಂಡ ಬಹುಶಿಸ್ತೀಯ ವಿಧಾನ ಅತ್ಯಗತ್ಯ. ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಈ ವಿಷಯದ ಬಗ್ಗೆ ಆಳ ಜ್ಞಾನ ಒದಗಿಸಲು ಈ ಕಾರ್ಯಾಗಾರ ಉತ್ತಮ ವೇದಿಕೆ ಒದಗಿಸಿದೆ ಎಂದು ಹೇಳಿದರು.
ಜಿಮ್ಸ್ ಪಲ್ಮನರಿ ಮೆಡಿಸಿನ್ ವಿಭಾಗದ ಉಸ್ತುವಾರಿ ಡಾ.ಎಸ್.ಎನ್.ಮಣಿದೇವಿ ಸ್ವಾಗತಿಸಿದರು. ಇದಕ್ಕೂ ಮುನ್ನ ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಸಸಿಗೆ ನೀರೆರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
"
ಮೂಗು, ಸೈನಸೈಟಿಸ್, ಅಸ್ತಮಾ, ಚರ್ಮ, ಔಷಧ ಹಾಗೂ ಆಹಾರ ಅಲರ್ಜಿ ಬಗ್ಗೆ ಸಮಗ್ರ ಮಾಹಿತಿ, ಆಧುನಿಕ ಚಿಕಿತ್ಸಾ ವಿಧಾನ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆದಿದೆ.