ಬಸವಕಲ್ಯಾಣ ಅನುಭವ ಮಂಟಪದ ಪರಿಸರದಲ್ಲಿ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ&16 ಹಾಗೂ ಲಿಂ. ಬಿ.ವಿ ಪಟೇಲರ್ 26ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶರಣಲೋಕ ಕೃತಿ ಬಿಡುಗಡೆಗೊಳಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಮಾತೆ ಸುಗುಣಾತಾಯಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಬಸವರಾಜ ಶರಣರು ವೆಂಕಟಾಪುರ, ಸೋಮನಾಥ ಯಾಳವಾರ, ಶೋಭಾ ಔರಾದೆ ಇದ್ದರು.
ಬಸವಕಲ್ಯಾಣ: ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬರೆದಿರುವ ಶರಣಲೋಕ ಅಪರೂಪದ ಕೃತಿ ಆಗಿದೆ. ಇದರಲ್ಲಿ 150 ಶರಣರ ಚರಿತ್ರೆ ಒಳಗೊಂಡಿದ್ದು, ಶರಣರ ಕುರಿತು ವಚನಗಳ ಆಧಾರದ ಮೇಲೆ ಕೃತಿ ರಚಿಸಲಾಗಿದೆ ಎಂದು ಹಿರಿಯ ಸಾಹಿತಿ ಸೋಮನಾಥ ಯಾಳವಾರ ಹೇಳಿದರು.
ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ ವತಿಯಿಂದ ಅನುಭವ ಮಂಟಪದ ಪರಿಸರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ&16 ಹಾಗೂ ಲಿಂ. ಬಿ.ವಿ ಪಟೇಲರ್ 26ನೇ ಸ್ಮರಣೋತ್ಸವ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶರಣಲೋಕ ಕೃತಿ ಕುರಿತು ಉಪನ್ಯಾಸ ನೀಡಿದರು.
ಶಿರಗುಪ್ಪದ ಬಸವರಾಜ ಶರಣರು ವೆಂಕಟಾಪುರ ಮಾತನಾಡಿ, ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ವಚನಗಳು ತ್ರಿಪದಿ ಸಾಹಿತ್ಯ ಹಾಗೂ ಸ್ವರವಚನಗಳು ಬರೆದಿದ್ದಾರೆ. ಕೈಲಾಸ ಪೂರದೋರ್ಳ ದಂಡು ದಾಳಿ ಕಾಣಿರೋ ಎನ್ನುವುದು ಅಪರೂಪದ ಸ್ವರವಚನವಾಗಿದ್ದು, ಇದರಲ್ಲಿ ಅವರು ಅಂತರಂಗ ಮತ್ತು ಬಹಿರಂಗ ಯುದ್ದ ಗೆಲುವಿನ ರೀತಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಅಂತರಂಗದ ಯುದ್ದ ಗೆಲ್ಲಲು ನಮಗೆ ಶರಣರ ವಚನ ಹಾಗೂ ಸ್ವರವಚನಗಳು ದಾರಿ ದೀಪವಾಗಿದೆ ಎಂದು ಹೇಳಿದರು.
ಸಾನ್ನಿದ್ಯ ವಹಿಸಿದ್ದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಮಾತೆ ಸುಗುಣಾತಾಯಿ, ಶ್ರೀ ಪ್ರಭುಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶೋಭಾ ಔರಾದೆ ಹುಮನಾಬಾದ್ ಇತರರಿದ್ದರು. ಶಿವಕುಮಾರ ಬಿರಾದಾರ ನಿರೂಪಣೆ ಮಾಡಿದರು.
ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬರೆದಿರುವ ಶರಣಲೋಕ ಕೃತಿಯನ್ನು ವೆಂಕಟಾಪುರ ಲೋಕಾರ್ಪಣೆ ಮಾಡಿದರು. ಕರುಣಾ ಸಲಗರ ಬರೆದಿರುವ ಬದುಕಿ ನಡೆಗೆ ಕೃತಿ ಲೋಕಾರ್ಪಣೆ ಮಾಡಲಾಯಿತು. ಭಾಲ್ಕಿ ಪೂಜ್ಯರ ಅಮೃತ ಮಹೋತ್ಸವ ನಿಮಿತ್ತ ಬಸವಕಲ್ಯಾಣದ ಬಸವತತ್ವ ಪ್ರಸಾಕರನ್ನು ಹಾಗೂ ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು.