

ಆಳಂದ: ಕನಕದಾಸರು ಸಾಹಿತ್ಯದ ಮೂಲಕ ಸಮಾನತೆ, ಮಾನವೀಯತೆ ಹಾಗೂ ಭಕ್ತಿಯ ಸಂದೇಶ ಸಾರಿದ ಮಹಾನ್ ಸಂತ-. ಅವರ ತತ್ವಗಳು ಇಂದಿನ ಯುವಜನತೆಗೆ ಆದರ್ಶವಾಗಿವೆ ಎಂದು ಉಪನ್ಯಾಸಕ ರಾಜಶೇಖರ ಕಡಗನ ಹೇಳಿದರು. ಮಾತೋಶ್ರೀ ಪ್ರೇಮಿಳಾಬಾಯಿ ಮಾಧವರಾವ ಗುತ್ತೇದಾರ್ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಲಾನಿಕೇತನ ಟ್ರಸ್ಟ್ ಸಗರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸದಲ್ಲಿ ಮಾತನಾಡಿ, ಜಾತಿ, ಮತ, ಪಂಥಗಳ ಭೇದವನ್ನು ಮೀರಿ ಮಾನವೀಯ ಮೌಲ್ಯಗಳನ್ನು ಸಾರಿದ ಅಪರೂಪದ ದಾರ್ಶನಿಕರಾಗಿದ್ದಾರೆ. ಕನಕದಾಸರ ಸಾಹಿತ್ಯವನ್ನು ಓದುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಮೌಲ್ಯಗಳನ್ನು ರೂಢಿಸಿಕೊಳ್ಳಬಹುದು ಎಂದರು. ಬಾಬುರಾವ ಸರಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸತಿ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವ ಉದ್ದೇಶದಿಂದ ಉಪನ್ಯಾಸ ಆಯೋಜಿಸಲಾಗುತ್ತಿದೆ ಎಂದರು. ಕಲಾನಿಕೇತನ ಟ್ರಸ್ಟ್ ಸಗರ ಅಧ್ಯಕ್ಷ ಬಸವರಾಜ ಶಿಣ್ಣೂರ, ವಿಶ್ವನಾಥ ಘೋಡಕೆ, ಲಕ್ಷ್ಮಣ ದೇವಂತಗಿ ಇತರರಿದ್ದರು.