

ಬೆಳಗಾವಿ: ವಿದ್ಯಾಭ್ಯಾಸ ಆಂತರಿಕ ಜ್ಞಾನ, ಹೊಸತನ, ವಿವಿಧ ಸ್ಥಳಗಳ ಪರ್ಯಟನೆ, ನೈಸರ್ಗಿಕ ಪರಿಸರ ವೀಕ್ಷಣೆಯಿಂದ ಕಲಿಯಲು ಅವಕಾಶಗಳನ್ನು ಮಾಡಿಕೊಡುತ್ತದೆ. ಇವುಗಳನ್ನು ಉಪಯೋಗಿಸಿಕೊಂಡು ಹಂತ ಹಂತವಾಗಿ ಜ್ಞಾನ ಭಂಡಾರ ಬೆಳೆಸಿಕೊಳ್ಳಬೇಕು.
ಉತ್ತಮ ಕಲಿಕೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಹೇಳಿದರು. ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಪ್ರಥಮ ವರ್ಷದ ಬಿ.ಆರ್ಕಿಟೆಕ್ಚರ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ತಂತ್ರಜ್ಞಾನದ ಕೌಶಲ ಬಳಸಿಕೊಂಡು ಭಾರತೀಯ ವಾಸ್ತುಶಿಲ್ಪವನ್ನು ಜಗತ್ತಿಗೆ ಪ್ರಚುರಪಡಿಸುವ ನಿಟ್ಟಿನಲ್ಲಿ ಬೆಳವಣಿಗೆ ಹೊಂದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾರ್ಯೆ
ಪ್ರೊ.ಅನಾಮಿಕಾ ಮೋಹಿತೆ ಮಾತನಾಡಿ, ಬಿ.ಆರ್ಕಿಟೆಕ್ಚರ್ ಶಿಕ್ಷಣದ ಸ್ವರೂಪ, ಶೈಕ್ಷಣಿಕ ವಾತಾವರಣ, ಸ್ಟುಡಿಯೋ ಆಧಾರಿತ ಕಲಿಕೆ, ಕಾಲೇಜಿನ ಸೌಲಭ್ಯ, ನಿಯಮ ಹಾಗೂ ವಾಸ್ತುಶಿಲ್ಪ ಶಿಕ್ಷಣದ ಅವಧಿಯಲ್ಲಿ ದೊರೆಯುವ ವಿವಿಧ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಬೋಧಕರೊಂದಿಗೆ ಸಂವಾದ ನಡೆಸಿ, ಶೈಕ್ಷಣಿಕ ಹಾಗೂ ಕಾಲೇಜಿನ ಚಟುವಟಿಕೆಗಳಿಗೆ ಸಂಬಂಧಿಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಸುಪ್ರಿಯಾ ನರಗುಂದ, ಪಲ್ಲವಿ ಮರಕುಂಬಿ, ನಂಜುಂಡೇಶ್ವರ ಚಲವಾದಿ ಇತರರಿದ್ದರು. ಆಡಳಿತಾಧಿಕಾರಿ ರಾಜು ಜೋಶಿ ಸ್ವಾಗತಿಸಿದರು. ಐಶ್ವರ್ಯಾ ಹಿರೇಮಠ ನಿರೂಪಿಸಿದರು.