ಕೃಷಿ ಸೇವೆಗೆ 30 ಕಿಮೀ. ಸುತ್ತಾಟ!

ಚಿಂಚೋಳಿ ಮತೇತ್ರದ ಕೋಡ್ಲಿಯಲ್ಲಿರುವ ರೈತ ಸಂಪರ್ಕ ಕೇಂದ್ರ.
ಚಿಂಚೋಳಿ ಮತೇತ್ರದ ಕೋಡ್ಲಿಯಲ್ಲಿರುವ ರೈತ ಸಂಪರ್ಕ ಕೇಂದ್ರ.
Published on

ಪ್ರಮುಖ ಮುಖ್ಯಾಂಶಗಳು

  • ಗಡಿ ಭಾಗದ ಹಲವು ಗ್ರಾಮಗಳ ರೈತರು ಪರದಾಟ
  • ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ
ಚಿಂಚೋಳಿ: ಗಡಿಯಲ್ಲಿನ ಹಲವು ಗ್ರಾಮಗಳ ರೈತರು ಇಂದಿಗೂ ಕೃಷಿ ಸೌಲಭ್ಯ ಪಡೆಯುವುದಕ್ಕಾಗಿ ಮೈಲುಗಟ್ಟಲೆ ಅಲೆಯುವ ದುಸ್ಥಿತಿ ಎದುರಾಗಿದೆ. ಕೆಲ ಗ್ರಾಮಗಳ ಕೃಷಿಕರು ರೈತ ಸಂಪರ್ಕ ಕೇಂದ್ರದ ಸೇವೆಗಾಗಿ ಸುಮಾರು 30-35 ಕಿಮೀ. ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕನಕಪುರ, ಹೂಡದಳ್ಳಿ, ರುಸ್ತಂಪುರ, ಯಲಕಪಳ್ಳಿ, ಚಿಮ್ಮಇದಲಾಯಿ, ಹೂವಿನಬಾವಿ ಹಳ್ಳಿಗಳು ಕೋಡ್ಲಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿದ್ದು, ಇದು ಈ ಹಳ್ಳಿಗಳಿಂದ ಸುಮಾರು 30-35 ಕಿಮೀ ದೂರದಲ್ಲಿದೆ. ಹೀಗಾಗಿ ಕೃಷಿ ಸೌಕರ್ಯ ಪಡೆಯಲು ಹಾಗೂ ಇನ್ನಿತರ ಕೆಲಸ-ಕಾರ್ಯಕ್ಕಾಗಿ ದೂರದ ರೈತ ಸಂಪರ್ಕ ಕೇಂದ್ರಕ್ಕೆ ತಿರುಗಾಡಬೇಕಿದೆ.
ಹೂವಿನಭಾವಿ, ಯಲಕಪಳ್ಳಿ ಗ್ರಾಮದಿಂದ ಸುಮಾರು 4-6 ಕಿಮೀ. ದೂರದಲ್ಲೇ ಸುಲೇಪೇಟ, ಹೂಡದಳ್ಳಿ, ಕನಕಪುರದಿಂದ 6-8 ಕಿಮೀ ವ್ಯಾಪ್ತಿಯಲ್ಲಿ ಚಿಮ್ಮನಚೋಡ ಹಾಗೂ ಚಿಮ್ಮಇದಲಾಯಿಯಿಂದ 6 ಕಿಮೀ ದೂರದಲ್ಲಿ ಚಿಂಚೋಳಿ ರೈತ ಸಂಪರ್ಕ ಕೇಂದ್ರಗಳಿವೆ. ಆದರೆ ಈ ಎಲ್ಲ ಹಳ್ಳಿಗಳ ರೈತರು ಸುಮಾರು 30&35 ಕಿಮೀ ದೂರದಲ್ಲಿರುವ ಕೋಡ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೃಷಿ ಸೌಕರ್ಯ ಪಡೆಯಬೇಕು. ಈ ಸಮಸ್ಯೆ ಸರಿಪಡಿಸುವಂತೆ ಸಾಕಷ್ಟು ಬಾರಿ ರೈತರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬಿತ್ತನೆ ಕಾಲದಲ್ಲಿ ಬೀಜ&ಗೊಬ್ಬರ ಸಿಗದೆ, ದೂರದ ಊರುಗಳಿಗೆ ಅಲೆದಾಡುವುದರಿಂದ ರೈತರ ಸಮಯ ಹಾಳಾಗುತ್ತಿದೆ. ಗಡಿ ಗ್ರಾಮಗಳಿಂದ ಕಾಳಗಿ ತಾಲೂಕಿನ ಕೋಡ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಲು ಸೂಕ್ತ ಬಸ್​ ಸೌಕರ್ಯವಿಲ್ಲ. ದುಬಾರಿ ಹಣ ನೀಡಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ. ಇಂದಿನ ತಂತ್ರಾನ ಯುಗದಲ್ಲೂ ಅನ್ನದಾತ ಕೇವಲ ಒಂದು ಮೂಟೆ ಬೀಜ, ಗೊಬ್ಬರಕ್ಕಾಗಿ ಇಷ್ಟೊಂದು ದೂರ ಸಂಚರಿಸುವಂತಾಗಿರುವುದು ವ್ಯವಸ್ಥೆಯ ವಿಡಂಬನೆಯೇ ಸರಿ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ರೈತರ ಒಕ್ಕೊರಲ ಒತ್ತಾಯವಾಗಿದೆ.
ಉಪ ಕೇಂದ್ರವಾದ್ರೂ ಆರಂಭಿಸಲಿ
ಕನಕಪುರ, ಹೂಡದಳ್ಳಿ, ರುಸ್ತಂಪುರ, ಯಲಕಪಳ್ಳಿ, ಚಿಮ್ಮಇದಲಾಯಿ, ಹೂವಿನಬಾವಿ ರೈತರು ಕೃಷಿ ಸೌಕರ್ಯ ಪಡೆಯುವುದಕ್ಕಾಗಿ ಇನ್ನಿಲ್ಲದ ಪ್ರಾಯಾಸ ಪಡುವಂತಾಗಿದೆ. ಈ ಗ್ರಾಮಗಳಲ್ಲಿ ತಾತ್ಕಾಲಿಕ ಬೀಜ ವಿತರಣೆ ಕೇಂದ್ರ ಅಥವಾ ಉಪ&ಕೇಂದ್ರ ತೆರೆಯಬೇಕು. ಇದರಿಂದ ಇಷ್ಟೊಂದು ದೂರ ಅಲೆಯುವುದು ತಪ್ಪುತ್ತದೆ ಎಂಬುದು ರೈತರ ದೀರ್ಕಾಲದ ಬೇಡಿಕೆಯಾಗಿದೆ.
"

ಕಾಳಗಿ ತಾಲೂಕು ಕೇಂದ್ರವಾದರೂ ಚಿಂಚೋಳಿ ತಾಲೂಕಿನ ನಮಗೆ ಸಿಗಬೇಕಾದ ಕೃಷಿ ಸೌಲಭ್ಯ ಇನ್ನೂ ಹತ್ತಿರವಾಗಿಲ್ಲ. ಕೃಷಿ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಣ ಗಮನಹರಿಸಿ ಈ ಭಾಗದ ಗ್ರಾಮಗಳಿಗೆ ಹತ್ತಿರವಾಗುವಂತೆ ಹೆಚ್ಚುವರಿ ರೈತ ಸಂಪರ್ಕ ಕೇಂದ್ರ ಅಥವಾ ಸೌಲಭ್ಯ ವಿತರಣೆ ಕೇಂದ್ರ ಆರಂಭಿಸಬೇಕು.

— > ವಿರೇಶ ಯಂಪಳ್ಳಿ, ಚಿಂಚೋಳಿ
"

ಕಂದಾಯ ಇಲಾಖೆ ದಾಖಲೆಗಳಲ್ಲಿ ಬದಲಾವಣೆ ಆಗಬೇಕು. ಅಲ್ಲಿವರೆಗೆ ಕೋಡ್ಲಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಗೆ ಈ ಹಳ್ಳಿಗಳು ಒಳಪಡುತ್ತವೆ. ಕೃಷಿ ಇಲಾಖೆಯಿಂದ ಯಾವುದೇ ತಪ್ಪಿಲ್ಲ. ಈ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

— > ವೀರಶೆಟ್ಟಿ ರಾಠೋಡ್​, ಸಹಾಯಕ ಕೃಷಿ ನಿರ್ದೇಶಕ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net