400 ಬಿಂದುಗಳ ರೋಸ್ಟರ್ ಪ್ರಕಟ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ಬಹುದಿನಗಳಿಂದ ಚರ್ಚೆಯಲ್ಲಿದ್ದ ಪರಿಶಿಷ್ಟ ಜಾತಿಗಳ(ಎಸ್‌ಸಿ) ಒಳಮೀಸಲಾತಿ ಪ್ರಕ್ರಿಯೆ ಜಾರಿಯಾದ ಬೆನ್ನಲ್ಲೆ ನೇಮಕಾತಿ ಸಲುವಾಗಿ ಸರ್ಕಾರ 400 ಬಿಂದುಗಳ ರೋಸ್ಟರ್ ಹೊರಡಿಸಿದೆ. ಖಾಲಿ ಹುದ್ದೆಗಳ ನೇಮಕಾತಿ ಮತ್ತು ಪ್ರಾಧಿಕಾರಿಗಳು ಈ ರೋಸ್ಟರ್ ಪದ್ಧತಿಯನ್ನು ಪಾಲಿಸಬೇಕೆಂದು ರಾಜ್ಯ ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17 ರಿಂದ ಶೇ.15ಕ್ಕೆ ಸೀಮಿತಗೊಳಿಸಿ, ಅದರೊಳಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಅದರಂತೆ ಪ್ರವರ್ಗ-ಎಗೆ ಶೇ.5.25 ಪ್ರವರ್ಗ-ಬಿಗೆ ಶೇ. 5.25 ಮತ್ತು ಪ್ರವರ್ಗ-ಸಿ ಶೇ.4.5 ನಿಗದಿ ಪಡಿಸಿತು.
ಈ ಒಳಮೀಸಲಾತಿ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು 400 ಬಿಂದುಗಳ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮುಂದೆ ನಡೆಯುವ ಎಲ್ಲ ನೇರ ನೇಮಕಾತಿಗಳಲ್ಲಿ ಈ ರೋಸ್ಟರ್ ಬಿಂದುಗಳನ್ನು ಕಡ್ಡಾಯವಾಗಿ ವಿವಿಧ ನೇಮಕಾತಿ ಮತ್ತು ಆಯ್ಕೆ ಪ್ರಾಧಿಕಾರಗಳು ಪಾಲಿಸಬೇಕೆಂದು ಸೂಚಿಸಲಾಗಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿದೆ. ಈ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದ್ದು, ಹೊಸ ಒಳಮೀಸಲಾತಿ ನೀತಿಯ ಅನ್ವಯವೇ ಈ ನೇಮಕಾತಿಗಳು ನಡೆಯಲಿವೆ. ಈ ಹಿಂದೆ ಹೊರಡಿಸಲಾಗಿದ್ದ ಕೆಲವು ನೇಮಕಾತಿ ಅಧಿಸೂಚನೆ ಹಿಂಪಡೆದು ಹೊಸ ಮಾರ್ಗಸೂಚಿಯಂತೆ ಮರು ಅಧಿಸೂಚನೆ ಹೊರಡಿಸಲು ಆದೇಶದಲ್ಲಿ ತಿಳಿಸಲಾಗಿದೆ.
400 ಬಿಂದುಗಳ ರೋಸ್ಟರ್‌ನಲ್ಲಿ ಪರಿಶಿಷ್ಟ ಜಾತಿಯ ಯಾವುದೇ ಪ್ರವರ್ಗಗಳನ್ನು (ಪ್ರವರ್ಗ-ಎ,ಬಿ ಮತ್ತು ಸಿ) ನಮೂದಿಸದೇ ತಯಾರಿಸಲಾಗಿದೆ. ಹಿಂದಿನ ನೇರ ನೇಮಕಾತಿಯು ಯಾವ ಬಿಂದುವಿನವರೆಗೆ ಆಗಿರುತ್ತದೆಯೋ ಅದರ ನಂತರದ ಬಿಂದುವಿನಿಂದ ಹೊಸ ನೇಮಕಾತಿಯನ್ನು ಪ್ರಾರಂಭಿಸುವುದು. ಇದೇ ಪದ್ಧತಿಯನ್ನು ಸಮತಳ ಮೀಸಲಾತಿಗೂ ಅನುಸರಿಸುವುದು.
ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ 3 ಕ್ಕಿಂತ ಕಡಿಮೆ ಹುದ್ದೆಗಳು ಲಭ್ಯವಾಗುತ್ತಿದ್ದಲ್ಲಿ ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ಅವಕಾಶ ನೀಡಬೇಕಾಗಿರುವುದರಿಂದ 400 ರೋಸ್ಟರ್ ಬಿಂದುಗಳನ್ನು ಯಥಾವತ್ತಾಗಿ ಅನುಸರಿಸಬೇಕು. ಸಮತಳ ಮೀಸಲಾತಿಯನ್ನು ಸರ್ಕಾರದ ಆದೇಶ 2023ರಂತೆ ಅನುಸರಿಸಬೇಕು. ಈ ವೇಳೆ ಸಮತಳ ಮೀಸಲಾತಿಯು ಹಿಂದಿನ ನೇಮಕಾತಿಯಲ್ಲಿ ಯಾವ ಬಿಂದುವಿನಲ್ಲಿ ಅಂತಿಮಗೊಂಡಿರುತ್ತದೆಯೋ ಆ ಬಿಂದುವಿನ ನಂತರದ ಬಿಂದುವಿನಿಂದ ಪ್ರಾರಂಭಿಸಬೇಕೆಂದು ಸರ್ಕಾರ ಆದೇಶಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net