ರಾಜ್ಯದಲ್ಲಿ ಪ್ರತಿನಿತ್ಯ 29,463 ಕಮರ್ಷಿಯಲ್ ಸಿಲಿಂಡರ್ ಪೂರೈಕೆ : ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ

ಆಹಾರ ಸಚಿವ ಕೆ.ಎಚ್. ಮುನಿಯಪ್ಪ
ಆಹಾರ ಸಚಿವ ಕೆ.ಎಚ್. ಮುನಿಯಪ್ಪ
Published on
ಬೆಂಗಳೂರು:ಮಧ್ಯಪ್ರಾಚ್ಯ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸೇವಾ ವಲಯಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಅಗತ್ಯ ವಸ್ತುಗಳಡಿ ರಾಜ್ಯದಲ್ಲಿ ಪ್ರತಿನಿತ್ಯ 29,463 ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಸಲು ಕ್ರಮ ತೆಗೆದುಕೊಂಡಿದ್ದು, ಈ ಮೂಲಕ ಎಲ್ಪಿಜಿ ಸಿಲಿಂಡರ್ ವಿತರಣೆ ಮಿತಿಯನ್ನು ಶೇ.40ರಿಂದ ಶೇ.68ಕ್ಕೆ ಹೆಚ್ಚಳವಾಗಿದೆ.
ಯುದ್ಧ ಆರಂಭದಲ್ಲಿ ಶೇ.20 ಕೋಟಾ ಅಡಿ ಪ್ರತಿನಿತ್ಯ ವಾಣಿಜ್ಯ ಬಳಕೆಗೆ 9,544 ಎಲ್ಪಿಜಿ ಸಿಲಿಂಡರ್ ವಿತರಿಸಲಾಗುತ್ತಿತ್ತು. ಬಳಿಕ, ಕೋಟಾದ ಮಿತಿಯನ್ನು ಶೇ.20ರಿಂದ ಶೇ.40ಕ್ಕೆ ಹೆಚ್ಚಿಸಿ 16,105 ಎಲ್ಪಿಜಿ ಸಿಲಿಂಡರ್ ಸರಬರಾಜು ಮಾಡಲಾಗುತ್ತಿತ್ತು. ಇದೀಗ, ಶೇ.40ರಿಂದ ಶೇ.68ಕ್ಕೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಸಿಲಿಂಡರ್‌ಗಳನ್ನು ಆದ್ಯತೆ ಅನುಸಾರವಾಗಿ ಹಂಚಿಕೆ ಮಾಡಲಾಗಿದ್ದು, ಹೋಟೆಲ್‌ಗಳಿಗೆ ನಿತ್ಯ 17,500 ಸಿಲಿಂಡರ್ ವಿತರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಟೋ ಎಲ್ಪಿಜಿ ಸೇರಿ ಇತರ ವಲಯಗಳಿಗೆ ಹಿಂದಿನ ಹಂಚಿಕೆ ಆದೇಶದಂತೆ ಸಿಲಿಂಡರ್ ಪ್ರಕ್ರಿಯೆ ಮುಂದುವರಿಯಲಿದೆ. ಕೆಲವು ಖಾಸಗಿ ಅನಿಲ ವಿತರಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಸಿಲಿಂಡರ್ ಮಾರಾಟ ಮಾಡುತ್ತಿರುವುದು ದೂರುಗಳು ಬಂದಿವೆ. ಎಲ್ಲ ಎಲ್ಪಿಜಿ ವಿತರಕರು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸಬೇಕು. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಗೃಹ, ವಾಣಿಜ್ಯ ಬಳಕೆ ಸಿಲಿಂಡರ್, ಆಟೋ ಎಲ್ಪಿಜಿ ಮಾರಾಟ ಮಾಡಿದರೆ ಪರವಾನಗಿ ರದ್ದುಗೊಳಿಸುವುದಾಗಿ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇಲ್ವಿಚರಣಾ ಸಮಿತಿ ರಚಿಸಲಾಗಿದ್ದು, ಎಲ್ಪಿಜಿ ಪೂರೈಕೆ, ವಿತರಣೆ, ದರ ನಿಯಂತ್ರಣ ಮತ್ತು ದುರುಪಯೋಗ ತಡೆ ಕುರಿತು ನಿರಂತರವಾಗಿ ಮೇಲ್ವಿಚರಣೆ ನಡೆಸಲಾಗುತ್ತಿದೆ. ಹೆಚ್ಚವರಿ ಸಿಲಿಂಡರ್ ಪೂರೈಕೆ ದೊರೆಯುವುದರಿಂದ ರಾಜ್ಯದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಸುಧಾರಣೆಯಾಗುವ ನಿರೀಕ್ಷೆ ಇದೆ ಎಂದರು.
ಪ್ರತಿ ಲೀಟರ್‌ಗೆ 77.74 ರೂ.ನಿಗದಿ
ಬೆಂಗಳೂರು ನಗರ 31 ಸೇರಿ ರಾಜ್ಯಾದ್ಯಂತ ಒಟ್ಟು 72 ಆಟೋ ಎಲ್ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳಿವೆ. ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳಾದ(ಒಎಂಸಿ) ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್, ಪ್ರತಿ ಲೀಟರ್‌ಗೆ 77.74 ರೂ.ನಂತೆ ಎಲ್ಪಿಜಿ ಸರಬರಾಜು ಮಾಡುತ್ತಿವೆ. ಹಾಗಾಗಿ, ರಾಜ್ಯದಲ್ಲಿ ಆಟೋ ಎಲ್ಪಿಜಿ ಕೊರತೆ ಇಲ್ಲ.ಕಳೆದ ವಾರ ತೈಲ ಕಂಪನಿಗಳು 64.9 ಮೆಟ್ರಿಕ್ ಟನ್ ಆಟೋ ಎಲ್ಪಿಜಿ ವಿತರಣೆ ಮಾಡಿವೆ. ಸಂಘರ್ಷದ ಮೊದಲು ದಿನಕ್ಕೆ 57.6 ಮೆ.ಟನ್ ವಿತರಣೆ ಮಾಡಲಾಗುತ್ತಿತ್ತು. ಪ್ರತಿನಿತ್ಯ ಅಂದಾಜು 4 ಲಕ್ಷ ಗೃಹ ಬಳಕೆಯ ಸಿಲಿಂಡರ್ ವಿತರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಿಲಿಂಡರ್ ವಿತರಣೆ ವಿವರ:
* ಹೋಟೆಲ್, ಡಾಬಾ, ರೆಸ್ಟೋರೆಂಟ್, ಕಾರ್ಖಾನೆ, ಕೆಎಂಎ್, ಡೇರಿ, ಸಮುದಾಯ ಅಡುಗೆ ಕೇಂದ್ರಗಳು, ಪಿಜಿ ಕ್ಯಾಂಟೀನ್, ಕ್ರೀಡಾ ವಸತಿಗೆ ನಿಲಯಗಳಿಗೆ 17,500 ಸಿಲಿಂಡರ್
* ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆ ಸೇರಿ ಅವಶ್ಯಕ ಸಂಸ್ಥೆಗಳಿಗೆ 4,200 ಎಲ್ಪಿಜಿ ಪೂರೈಕೆ
* ಬೀಜ ಸಂಸ್ಕರಣೆ, ಕೃಷಿ, ಔಷದೋದ್ಯಮ, ಮೀನುಗಾರಿಕೆ ಕೋಳಿ, ರೇಷ್ಮೆ ಹುಳು ಸಾಕಣೆಗೆ 6 ಸಾವಿರ ಸಿಲಿಂಡರ್
* ಸರ್ಕಾರ/ಪಿಎಸ್‌ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣ ಕ್ಯಾಂಟೀನ್‌ಗಳಿಗೆ 1,200 ಸಿಲಿಂಡರ್
* ಇತರ ಅವಶ್ಯಕತೆ ಆಧಾರದ ಮೇಲೆ 563 ಅಡುಗೆ ಅನಿಲ ವಿತರಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net