ರಾಜ್ಯದಲ್ಲಿ ಏ.5ವರೆಗೆ ಗುಡುಗು ಸಹಿತ ಆಲಿಕಲ್ಲು ಮಳೆ-Rain

ಏ.5ವರೆಗೆ ಆಲಿಕಲ್ಲು ಮಳೆ
ಏ.5ವರೆಗೆ ಆಲಿಕಲ್ಲು ಮಳೆ
Published on
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ,ತೇವಾಂಶ ಭರಿತ ಮೋಡದ ಕಾರಣದಿಂದ ರಾಜ್ಯದ ಹಲವೆಡೆ ಭಾನುವಾರವೂ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಏ.5ವರೆಗೆ ಇದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಬೆಂ.ಗ್ರಾಮಾಂತರ, ಬೆಳಗಾವಿ, ಬೀದರ್, ಧಾರವಾಡ ಮತ್ತು ಹಾವೇರಿಯಲ್ಲಿ ಮಾ.30ರಿಂದ ಏ.5ರವರೆಗೆ ಆಲಿಕಲ್ಲು ಮಳೆಯಾಗಲಿದೆ. ಕಲಬುರಗಿ, ವಿಜಯಪುರದಲ್ಲಿ ಮಾ.31ರಿಂದ ಮುಂದಿನ 3 ದಿನ, ಚಿತ್ರದುರ್ಗ, ದಾವಣಗೆರೆಯಲ್ಲಿ ಏ.2ರಿಂದ ಏ.5ರವರೆಗೆ ಹಾಗೂ ತುಮಕೂರು, ಕೋಲಾರದಲ್ಲಿ ಮಾ.30ರಂದು ವರ್ಷಧಾರೆಯಾಗಲಿದೆ. ಈ ಸಂದರ್ಭದಲ್ಲಿ ಕೆಲ ಜಿಲ್ಲೆಗಳಲ್ಲಿ ಗಾಳಿ ವೇಗ ಹೆಚ್ಚಿರಲಿದೆ.
ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಸಾಧಾರಣ ಮಳೆ ಬೀಳಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 35 ಡಿ.ಸೆ. ಮತ್ತು 21 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ.
ಹಲವೆಡೆ ಬಿಸಿಲು ಜಾಸ್ತಿ:
ರಾಜ್ಯದಲ್ಲಿ ಅಗಾಗ್ಗೆ ಮಳೆ ಸುರಿಯುತ್ತಿದ್ದರೂ ಕರಾವಳಿ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವೂ ವಾಡಿಕೆಗಿಂತ 1.6 ಡಿ.ಸೆ. ನಿಂದ 3 ಡಿ.ಸೆ.ವರೆಗೆ ಉಷ್ಣಾಂಶ ಹೆಚ್ಚಳವಾಗಿದೆ. ಉಳಿದ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ವಾಡಿಕೆಗಿಂತ ಕಡಿಮೆ ದಾಖಲಾಗುತ್ತಿದೆ. ಆದರೂ, ಬೆಳಗ್ಗೆ 9 ಗಂಟೆಯಿಂದಲೇ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತಿದೆ. ಮುಂದಿನ 5 ದಿನವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ,ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಹೇಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net