ಡೆಂಘೆ 21088 ತಪಾಸಣೆ, 111 ದೃಢ

,
,
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆಗಳಲ್ಲಿ ಅಗತ್ಯ ಹಾಸಿಗೆ, ಔಷಧ ಲಭ್ಯ
  • ನಿಯಂತ್ರಣಕ್ಕೆ ಸಮರೋಪಾದಿ ಕಾರ್ಯಾಚರಣೆ
ಕಲಬುರಗಿ: ಮಳೆಗಾಲ ಹಿನ್ನೆಲೆಯಲ್ಲಿ ಡೆಂಘೆ ಪ್ರಕರಣ ಹೆಚ್ಚಾಗುತ್ತಿರುವ ಮಧ್ಯೆ ಜಿಲ್ಲೆಯಲ್ಲಿ ರೋಗ ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಮರೋಪಾದಿ ಕಾರ್ಯಾಚರಣೆ ನಡೆಸಿದೆ. 2026ರಲ್ಲಿ ಈವರೆಗೆ 21088 ಶಂಕಿತ ಡೆಂಘೆ ಪ್ರಕರಣದ ರಕ್ತ ಪರೀಕ್ಷೆ ನಡೆಸಿದ್ದು, 111 ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ತಿಳಿಸಿದ್ದಾರೆ.
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಡೆಂಘೆ ಸಂಬಂಧಿ ಸಾವು ಸಂಭವಿಸಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಶಂಕಿತ ಪ್ರಕರಣ ಪರೀಸಿದ್ದರೂ ನಿರಂತರ ಜ್ವರ ಮತ್ತು ಲಾರ್ವಾ ಸಮೀೆಯ ಫಲವಾಗಿ ರೋಗ ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ.
ಕಲಬುರಗಿ ನಗರದಲ್ಲಿ 46, ಚಿತ್ತಾಪುರ 19, ಸೇಡಂ 13, ಕಲಬುರಗಿ ಗ್ರಾಮೀಣ 11, ಜೇವರ್ಗಿ 7, ಆಳಂದ 6, ಅಫಜಲಪುರ 5 ಹಾಗೂ ಚಿಂಚೋಳಿಯಲ್ಲಿ 4 ಪ್ರಕರಣ ಪತ್ತೆಯಾಗಿವೆ. ಸುಮಾರು 2015 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಸೊಳ್ಳೆಮುಕ್ತ ಶಾಲಾ ಆವರಣ ಪ್ರಮಾಣವಚನ ಬೋಧಿಸಿ ನೆರೆಹೊರೆಯಲ್ಲಿ ಜಾಗೃತಿ ಮೂಡಿಸಲು ತಿಳಿಹೇಳಲಾಗಿದೆ.
ಪ್ರತಿ ಶುಕ್ರವಾರ ಡೆಂಘೆ ಮೂಲ ನಿಮೂರ್ಲನಾ ದಿನ ಆಚರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು 15 ದಿನಕ್ಕೊಮ್ಮೆ ಮನೆ&ಮನೆಗೆ ಭೇಟಿ ನೀಡಿ ಲಾರ್ವಾ ಸಮೀೆ ನಡೆಸುತ್ತಿದ್ದಾರೆ. ಜಿಮ್ಸ್​ ಆಸ್ಪತ್ರೆಯಲ್ಲಿ 10, ತಾಲೂಕು ಆಸ್ಪತ್ರೆಗಳಲ್ಲಿ 5 ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2&3 ಹಾಸಿಗೆ ಹಾಗೂ ರಕ್ತ, ಪ್ಲೇಟ್​ಲೆಟ್​ ಹಾಗೂ ಅಗತ್ಯ ಔಷಧ ಕಾಯ್ದಿರಿಸಲಾಗಿದೆ.
ಖಾಸಗಿ ಆಸ್ಪತ್ರೆಗಳು ಡೆಂಘೆ ಪತ್ತೆಯಾದ ತಕ್ಷಣ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿ ಪೋರ್ಟಲ್​ನಲ್ಲಿ ದಾಖಲಿಸಬೇಕು. ಡೆಂಘೆ ಹರಡುವ ಸೊಳ್ಳೆಗಳು ಮುಖ್ಯವಾಗಿ ಹಗಲು ವೇಳೆ ಕಚ್ಚುತ್ತವೆ. ಮನೆಯ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಸಾರ್ವಜನಿಕರು ಪ್ರತಿ ಶುಕ್ರವಾರ 10 ನಿಮಿಷ ನೀರು ನಿಲ್ಲುವ ಪಾತ್ರೆ ಸ್ವಚ್ಛಗೊಳಿಸಬೇಕು ಎಂದು ಡಿಎಚ್​ಒ ಡಾ.ಕ್ಯಾತನಾಳ ಮನವಿ ಮಾಡಿದ್ದಾರೆ.
"

ತೀವ್ರ ಜ್ವರ ಹಾಗೂ ಮೈಕೈ ನೋವಿನ ಲಕ್ಷಣ ಕಂಡುಬಂದರೆ ಸ್ವಯಂ ಔಷಧ ತೆಗೆದುಕೊಳ್ಳದೆ ತಕ್ಷಣ ಉಚಿತ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕು.

— > ಡಾ.ಶರಣಬಸಪ್ಪ ಕ್ಯಾತನಾಳ ಜಿಲ್ಲಾ ಆರೋಗ್ಯಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net