

ಬೆಂಗಳೂರು: ಸತತ ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶದಲ್ಲಿ ತುರ್ತ, ತಾತ್ಕಾಲಿಕ ಪರಿಹಾರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಂಡು ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳ ಜತೆಗೆ ವಿಡಿಯೋ ಸಂವಾದ ನಡೆಸಿದ ಭಾರಿ ಮಳೆ ನಷ್ಟ-ಕಷ್ಟದ ಕುರಿತು ಶುಕ್ರವಾರ ಮಾಹಿತಿ ಸಂಗ್ರಹಿಸಿದ ಅವರು, ಸಕಾಲಕ್ಕೆ ವಸ್ತುಸ್ಥಿತಿ ಮಾಹಿತಿ ಪಡೆದು ಹಣ ಬಿಡುಗಡೆ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳೇ ನಿರ್ಧರಿಸಬೇಕು ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ನಿಯಮಾವಳಿ ಪ್ರಕಾರ ಜಿಲ್ಲಾ ಹಂತದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಇದಕ್ಕಾಗಿ ಪಿಡಿ ಖಾತೆಯಲ್ಲಿನ ಹಣವನ್ನು ಬಳಸಿಕೊಳ್ಳಬೇಕು ಎಂದ ಸಿಎಂ ಬೊಮ್ಮಾಯಿ, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಸದಾ ಜಾಗೃತರಾಗಿದ್ದುಕೊಂಡು ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು. ಅನಾಹುತ ಹಾಗೂ ಹಾನಿ ಸಂಭವಿಸಿದ ಸ್ಥಳಕ್ಕೆ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಖುದ್ದು ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಬೇಕು. ತ್ವರಿತವಾಗಿ ಭೇಟಿ ನೀಡುವುದರಿಂದ ಸಂಕಷ್ಟಕ್ಕೆ ಸಿಲುಕಿದ ಜನರಲ್ಲಿ ಸರ್ಕಾರ ತಮ್ಮ ಜತೆಗಿದೆ ಎಂಬ ಧೈರ್ಯ ಬರುತ್ತದೆ. ಹಾಗೆಯೇ ವಾಸ್ತವಾಂಶ ಅರಿತು, ಸೂಕ್ತ ಪರಿಹಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
9 ಮಂದಿ ಸಾವು: ನಿರಂತರ ಮಳೆಗೆ ಕಟ್ಟದ ಕುಸಿದು ಬಿದ್ದು ಶುಕ್ರವಾರ 9 ಮಂದಿ ಸಾವಿಗೀಡಾಗಿದ್ದಾರೆ. ಚಳ್ಳಕೆರೆ ತಾಲೂಕು ನಾಯಕನಹಟ್ಟಿಯ ಅಂಬೇಡ್ಕರ್ ನಗರದಲ್ಲಿ ಗುಡಿಸಲಿನ ಮೇಲೆ ಪಕ್ಕದಲ್ಲಿದ್ದ ಶಿಶುವಿಹಾರದ ಹಳೇ ಕಟ್ಟಡ ಬಿದ್ದು ದಂಪತಿ ಸಾವಿಗೀಡಾಗಿದ್ದು, ಪುತ್ರ ಗಂಭೀರ ಗಾಯಗೊಂಡಿದ್ದಾನೆ. ಕಂಪ್ಲೇಶ್ (44), ಈತನ ಪತ್ನಿ ತಿಪ್ಪಮ್ಮ (40) ಮೃತರು. ಹಿರಿಯೂರು ತಾಲೂಕು ಬ್ಯಾಡರಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಹೆಂಚಿನ ಮನೆ ಗೋಡೆ ಕುಸಿದು ತ್ರಿವೇಣಿ (27) ಎಂಬ ಮಹಿಳೆ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ವರಹಸಂದ್ರದಲ್ಲಿ ಮನೆ ಬಳಿಯ ಕಟ್ಟೆಯಲ್ಲಿ ಕಾಲುಜಾರಿ ಬಿದ್ದು ಹೆಣ್ಣು ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿಯ ಮುಗಬಾಳದಲ್ಲಿ ಮನೆ ಕುಸಿದು ಮುನಿಯಮ್ಮ(65) ಎಂಬುವವರು ಮೃತಪಟ್ಟಿದ್ದಾರೆ. ಕೋಲಾರ ತಾಲೂಕಿನ ಕೆಂದಟ್ಟಿಯಲ್ಲಿ ಮನೆ ಗೋಡೆ ಕುಸಿದು ಪ್ರಭಾಕರ್ (50) ಎಂಬುವವರು ಮೃತಪಟ್ಟಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಸಮೀಪದ ಮಾಳಪಲ್ಲಿ ಕೆರೆಯಲ್ಲಿ ಶುಕ್ರವಾರ ಅಪರಿಚಿತ ಶವ ಶುಕ್ರವಾರ ಬೆಳಗಿನ ಜಾವ ಪತ್ತೆಯಾಗಿದೆ. ಬಾಗೇಪಲ್ಲಿಯ ಬಿಳ್ಳೂರು ಗ್ರಾಮದಲ್ಲಿ ಕೆರೆಕೋಡಿ ವೀಕ್ಷಿಸಲು ಹೋಗಿದ್ದ ಐವರು ಯುವಕರಲ್ಲಿ ಒಬ್ಬ ಕೊಚ್ಚಿಹೋಗಿದ್ದಾನೆ.
ರಾಜ್ಯಕ್ಕೆ ಯೆಲ್ಲೋ ಅಲರ್ಟ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 2 ದಿನ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ನ.22ರಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಕ್ಷೀಣಿಸುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮುನ್ನೆಚ್ಚರಿಕೆಗೆ ಸೂಚನೆ: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನ.19 ಮತ್ತು ನ.20 ರಂದು ಕೆಲವು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ಈ ದಿನದ ತರಗತಿಗಳು ಮುಂದಿನ ಭಾನುವಾರದಂದು ನಡೆಯಲಿವೆ. ಸಮಸ್ಯೆ ಇರುವ ಕಡೆ ರಜೆ ನೀಡುವಂತೆ ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ಶಿಥಿಲವಾಗಿರುವ ಮತ್ತು ಅಪಾಯದ ಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳನ್ನು ಕೊಠಡಿಗಳನ್ನು ಬಳಸದಂತೆ, ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.
22 ಜಿಲ್ಲೆಗಳಲ್ಲಿ ಹೆಚ್ಚು ಮಳೆ: ನ.1ರಿಂದ ನ.19ರವರೆಗೆ 22 ಜಿಲ್ಲೆಗಳಲ್ಲಿ ಅತಿ ಹೆಚ್ಚು, 1 ಜಿಲ್ಲೆಯಲ್ಲಿ ಹೆಚ್ಚು ಹಾಗೂ 6 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆ ಸುರಿದಿದೆ. ಬೀದರ್ ಮತ್ತು ಬಾಗಲಕೋಟೆಯಲ್ಲಿ ಶೇ.50 ಮಳೆ ಕೊರತೆಯಾಗಿದೆ. 151 ತಾಲೂಕುಗಳಲ್ಲಿ ಅತಿ ಹೆಚ್ಚು, 25 ತಾಲೂಕುಗಳಲ್ಲಿ ಹೆಚ್ಚು ಮತ್ತು 27 ತಾಲೂಕುಗಳಲ್ಲಿ ವಾಡಿಕೆ ಮಳೆಯಾದರೆ, 24 ತಾಲೂಕುಗಳಲ್ಲಿ ವಾಡಿಕೆಗಿಂಥ ಕಡಿಮೆ ಮಳೆ ಬಿದ್ದಿದೆ.
ಅಕಾಲಿಕ ಮಳೆಯಿಂದಾಗಿ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಈಗಾಗಲೆ ಅಧಿಕಾರಿಗಳು ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ಸರ್ಕಾರಕ್ಕೆ ವರದಿ ಸಲ್ಲಿಸಿ, ಶೀಘ್ರವೇ ರೈತರಿಗೆ ಪರಿಹಾರ ವಿತರಿಸಲಾಗುವುದು.
| ಬಿ.ಸಿ. ಪಾಟೀಲ ಕೃಷಿ ಸಚಿವ
ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಿಜೆಪಿ ಕಾರ್ಯಕರ್ತರು ರೈತರ ಸಂಕಷ್ಟವನ್ನು ಪ್ರತ್ಯಕ್ಷವಾಗಿ ತಿಳಿದು ಸಿಎಂ ಅವರ ಗಮನಕ್ಕೆ ತಂದು, ಕೂಡಲೇ ಕೇಂದ್ರದ ಗಮನಕ್ಕೆ ತರಲು ನೆರವಾಗಲಿದ್ದಾರೆ. ಸರ್ಕಾರ ತಕ್ಷಣ ಮಳೆ ಹಾನಿಗೆ ಸ್ಪಂದಿಸುವಂತೆ ಮನವಿ ಮಾಡಿಕೊಳ್ಳಲಾಗುವುದು.
| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ
ಮಳೆಯಿಂದ ಜನ ಸಂಕಷ್ಟ ದಲ್ಲಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಶಂಖ ಊದಿಕೊಂಡು ಹೋದರೆ ಸ್ವರಾಜ್ಯ ಸಿಗುತ್ತದಾ? ಯಾರ ಸ್ವರಾಜ್ಯಕ್ಕಾಗಿ ಈ ಯಾತ್ರೆ? ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ?
| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ನಿರೀಕ್ಷೆ ಮಾಡದ ರೀತಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಭತ್ತ, ರಾಗಿ, ಜೋಳ ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿದೆ. ಭತ್ತ ಒಣಗಿಸಲಾಗದ ಪರಿಸ್ಥಿತಿ ಎದುರಾಗಿದ್ದು, ಅಗ್ರಿಕಲ್ಚರ್ ಇನ್ಫ್ರಾಸ್ಟ್ರಕ್ಚರ್ ಫಂಡ್ನಿಂದ ಡ್ರೖೆಯರ್ ಖರೀದಿಗೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಲಿದೆ. ವೇರ್ಹೌಸ್ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು.
| ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ