ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 20 ಸಾವಿರಕ್ಕೆ ಏರಿದರೂ ಹೋರಾಟಕ್ಕೆ ಸಿದ್ಧವಿದೆ ಸರ್ಕಾರ...

Lead a may 20
Published on

ಬೆಂಗಳೂರು: ಕರೊನಾ ವ್ಯಾಪಿಸುವಿಕೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದ ರಾಜ್ಯ ಸರ್ಕಾರ, ಇದೀಗ ಅತಿ ಕೆಟ್ಟ ಸಂದರ್ಭ ಬಂದರೂ ಅದನ್ನು ಎದುರಿಸಲು ಕ್ರಿಯಾಯೋಜನೆ ಸಿದ್ಧ ಮಾಡಿಕೊಂಡಿದೆ.

ಈಗಾಗಲೇ ಕರೋನಾ ಸೋಂಕಿತರ ಸಂಖ್ಯೆ 589ಕ್ಕೆ ಏರಿದ್ದು, 21 ಜನರು ಮೃತಪಟ್ಟಿದ್ದಾರೆ. ಈ ನಡುವೆಯೇ ಮುಂದಿನ ದಿನಗಳಲ್ಲಿ ಕರೊನಾ ವ್ಯಾಪಿಸುವ ವೇಗ ಅರಿಯುವ ಕೆಲಸ ನಡೆಸಿರುವ ತಜ್ಞರು ಸರ್ಕಾರಕ್ಕೆ ಆಗಿಂದಾಗ್ಯೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಜನರ ಓಡಾಟ ನಿಯಂತ್ರಣಕ್ಕೆ ಬಾರದ ಕಾರಣ ಇನ್ನಷ್ಟು ದಿನ ಪೂರ್ಣ ಲಾಕ್​ಡೌನ್ ಸಾಧ್ಯವಿಲ್ಲ. ಒಂದು ವೇಳೆ ಸಡಿಲ ಮಾಡಿದರೆ ಆಗಬಹುದಾದ ಬೆಳವಣಿಗೆಯನ್ನು ಅವಲೋಕಿಸಿ ಮೇ 6ರ ವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಲಿದೆ ಎಂದೂ ವರದಿ ನೀಡಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಕ್ರಿಯಾಯೋಜನೆ ಸಿದ್ಧ ಮಾಡಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 20 ಸಾವಿರ ತಲುಪಿದರೂ ಚಿಕಿತ್ಸೆ ನೀಡಲು ಸಾಧ್ಯವಾಗುವಷ್ಟು ತಯಾರಿ ಮಾಡಿಕೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಒಮ್ಮೆಲೇ ಐದು ಸಾವಿರವಾದರೆ ಅಷ್ಟು ಬೆಡ್ ಮತ್ತು ಅವರಿಗಾಗುವಷ್ಟು ವೈದ್ಯರು, ಆರೋಗ್ಯ ಸಿಬ್ಬಂದಿ, ಔಷಧ, ಉಪಕರಣಗಳನ್ನು ಗುರುತಿಸಿ ವ್ಯವಸ್ಥೆ ಮಾಡಬಹುದು. ಬೆಂಗಳೂರು ಹೊರತು ಉಳಿದ ಜಿಲ್ಲೆಗಳಲ್ಲಿನ ಒಟ್ಟು ವ್ಯವಸ್ಥೆ ಪ್ರಕಾರ 15 ಸಾವಿರ ಮಂದಿ ಸೋಂಕಿತರಿಗೆ ಆಗುವಷ್ಟು ತಯಾರಿ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಲ್ಲಿ ಐದು ಸಾವಿರ ಸೋಂಕಿತರಿಗೆ ಚಿಕಿತ್ಸೆ ನೀಡಲು 2,241 ಕಿರಿಯ ವೈದ್ಯರ ಅವಶ್ಯಕತೆ ಇದೆ. ಪ್ರಸ್ತುತ 310 ಜ್ಯೂನಿಯರ್ ವೈದ್ಯರು ಸಿದ್ಧರಿದ್ದಾರೆ. ಇನ್ನೂ 1,078 ಮಂದಿಯನ್ನು ಸಲಹೆಗಾರರ ರೂಪದಲ್ಲಿ ಬಳಸಲಾಗುತ್ತದೆ. ಸೋಂಕಿತರ ದಾಖಲೆಗಳನ್ನು ನಿರ್ವಹಿಸಲು 700 ಡೇಟಾ ಎಂಟ್ರಿ ಆಪರೇಟರ್​ಗಳ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. ಯಾವ ವಿಭಾಗದಲ್ಲಿ ಕೊರತೆಯಾಗುತ್ತದೋ ಅಲ್ಲಿಗೆ ಖಾಸಗಿಯವರನ್ನು ಬಳಸಿಕೊಳ್ಳಲು ಪ್ರಸ್ತಾವನೆ ತಯಾರಿ ಮಾಡಿಕೊಳ್ಳಲಾಗುತ್ತದೆ. ಸರ್ಕಾರಿ ಆಸ್ಪತ್ರೆ ಜತೆಗೆ ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆಗಳನ್ನೂ ಗುರುತಿಸಲಾಗಿದೆ.

ದಿನಕ್ಕೆ 5 ಸಾವಿರ ಸ್ಯಾಂಪಲ್ ಟೆಸ್ಟ್: ರಾಜ್ಯದಲ್ಲಿ ಕರೊನಾ ಸೋಂಕಿತರನ್ನು ಪರೀಕ್ಷಿಸಿ ವರದಿ ನೀಡಲು ಪ್ರಸ್ತುತ 26 ಲ್ಯಾಬ್​ಗಳು ಕಾರ್ಯನಿರ್ವಹಿಸುತ್ತಿದ್ದು, ಸರಿಸುಮಾರು 5 ಸಾವಿರ ಸ್ಯಾಂಪಲ್​ಗಳ ಪಡೆಯುವ ಸಾಮರ್ಥ್ಯವಿದೆ. ಮೇ ಅಂತ್ಯದೊಳಗೆ 60 ಕೋವಿಡ್ ಟೆಸ್ಟಿಂಗ್ ಲ್ಯಾಬ್ ಹೊಂದುವ ಗುರಿ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ವಿವರಣೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಗದಗ, ತುಮಕೂರು ಮತ್ತು ವಿಜಯಪುರಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿರುವುದರಿಂದ ರಾಜ್ಯದಲ್ಲೀಗ 26 ಕೋವಿಡ್ ಟೆಸ್ಟಿಂಗ್ ಲ್ಯಾಬ್​ಗಳು ಕಾರ್ಯ ನಿರ್ವಹಿಸುವಂತಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ ಈಗ ದಿನಕ್ಕೆ 5,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಲಭ್ಯ ಆದಂತಾಗಿರುವುದರ ಜತೆಗೆ ವೈದ್ಯಕೀಯ ಸೌಲಭ್ಯ ಹೆಚ್ಚಳ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಲ್ಯಾಬ್ ಸಂಖ್ಯೆ ಹೆಚ್ಚಿ ಟೆಸ್ಟಿಂಗ್ ಹೆಚ್ಚಾದರೆ ತ್ವರಿತ ಗತಿಯಲ್ಲಿ ಪಾಸಿಟಿವ್ ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಿಸಲು ಸಾಧ್ಯವಾಗುತ್ತಿದ್ದು, ರಾಜ್ಯದಲ್ಲಿ ಕರೋನ ವೈರಾಣು ಹರಡದಂತೆ ತಡೆಗಟ್ಟಲು ಇದು ಬಹಳ ಮಟ್ಟಿಗೆ ಸಹಕಾರಿ ಎಂದು ಸಚಿವರು ಹೇಳಿದ್ದಾರೆ. 4ಟಿ (ಟ್ರೇಸ್, ಟ್ರಾ್ಯಕ್, ಟೆಸ್ಟ್ ಮತ್ತು ಟ್ರೀಟ್) ಯೋಜನೆಯೊಂದಿಗೆ ಕರ್ನಾಟಕ ಅತ್ಯಂತ ಸಮರ್ಥವಾಗಿ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಕಚೇರಿಯಲ್ಲಿ ದುಂದುವೆಚ್ಚ

ಮುಳಬಾಗಿಲು: ನನ್ನ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಹಣದಲ್ಲಿ ಬಿಜೆಪಿ ಸರ್ಕಾರದ ಕೆಲಸಗಳು ನಡೆಯುತ್ತಿವೆ. ಸಿಎಂ ಕಚೇರಿಯಲ್ಲಿ ದುಂದು ವೆಚ್ಚವಾಗುತ್ತಿದೆ. ಅಲ್ಲಿಂದಲೇ ಕಡಿವಾಣ ಹಾಕಿ ಸರ್ಕಾರ ಹಣ ಕ್ರೋಡೀಕರಣಕ್ಕೆ ಮುಂದಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಎಫ್​ಡಿ ಹಣ 9 ಸಾವಿರ ಕೋಟಿ ರೂ. ಇದ್ದು, ಅದನ್ನು ಸರ್ಕಾರ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net