ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ: ಮಾರಾಟಕ್ಕೆ ಸಿಕ್ತು ಪರ್ಮಿಷನ್; ಹಾಗಾದ್ರೆ ಯಾವಾಗಿಂದ ಶುರುವಾಗ್ತವೆ ಮದ್ಯದಂಗಡಿಗಳು?

bar
Published on

ನವದೆಹಲಿ/ಬೆಂಗಳೂರು: ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಮದ್ಯಪ್ರಿಯರಿಗೆ ಶುಕ್ರವಾರ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಕರೊನಾಕ್ಕೆ ಸಂಬಂಧಿಸಿದಂತೆ ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಮಾಡಲು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಅನುಮತಿ ನೀಡಲಾಗಿದೆ.

ಆದರೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಬ್ಬೊಬ್ಬರಿಗೂ ಕನಿಷ್ಠ 6 ಅಡಿ ಅಂತರ ಇರಬೇಕು. ಒಂದು ಅಂಗಡಿಯಲ್ಲಿ ಏಕಕಾಲಕ್ಕೆ ಐದಕ್ಕಿಂತ ಹೆಚ್ಚು ಗ್ರಾಹಕರು ಇರುವಂತಿಲ್ಲ.

ಲಾಕ್‌ಡೌನ್ ಅನ್ನು ಮೇ 4ರಿಂದ ಇನ್ನೂ ಎರಡು ವಾರಗಳ ಕಾಲ ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದಲ್ಲಿ ಈ ಅಂಶಗಳನ್ನು ಕೇಂದ್ರ ಸ್ಪಷ್ಟಪಡಿಸಿದೆ.

ಮೇ 3ರಂದು ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯವಾದ ಬಳಿಕ ಮದ್ಯದಂಗಡಿಗಳು ಹಸಿರುವಲಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಎಲ್ಲೆಲ್ಲಿ?:

ರಾಮನಗರ, ಹಾಸನ, ಚಿಕ್ಕಮಗಳೂರು, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ ಮತ್ತಿತರ ಹಸಿರು ವಲಯದ ಜಿಲ್ಲೆಗಳಲ್ಲಿ ಎಂಎಸ್‌ಐಎಲ್ ಹಾಗೂ ಸಿಎಲ್-2 ಮದ್ಯದಂಗಡಿಗಳ ಮೂಲಕ ಮದ್ಯ ಮಾರಾಟ ಮಾಡಲು ಹಸಿರು ನಿಶಾನೆ ಸಿಕ್ಕಿದೆ.

ಆದರೆ, ಕೆಂಪು ವಲಯದಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅಲ್ಲಿಯೂ ಮದ್ಯದಂಗಡಿ ತೆರೆಯುವ ಸಾಧ್ಯತೆಗಳಿವೆ. ಆದರೆ ಈ ಕುರಿತು ಇನ್ನೂ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ಎಲ್ಲ ಮಾದರಿಯ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ರಾಜ್ಯದಲ್ಲಿ ಮದ್ಯ ಸಿಗದೆ ಬೇಸತ್ತು ಹಲವಾರು ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net