More

    ದೇಶದಲ್ಲಿ ಹೀಗಿರಲಿದೆ 3ನೇ ಹಂತದ ಲಾಕ್​ಡೌನ್​; ಸಡಿಲಿಕೆಯ ನಡುವೆಯೂ ಈ ಎಲ್ಲ ಕಠಿಣ ನಿರ್ಬಂಧಗಳ ಮುಂದುವರಿಕೆ…

    ನವದೆಹಲಿ: ಎರಡನೇ ಹಂತದ ಲಾಕ್​ಡೌನ್ ಅವಧಿ ಮೇ 3ರವರೆಗೆ ಮಾತ್ರ ಇತ್ತು. ಆದರೆ ಭಾರತದಲ್ಲಿ ಕರೊನಾ ವೈರಸ್​ ಪ್ರಸರಣ ಪ್ರಮಾಣ ಇಳಿಕೆಯಾಗಿಲ್ಲ. ಪ್ರತಿದಿನ ಸುಮಾರು ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.

    ಏ.27ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಲಾಕ್​ಡೌನ್ ವಿಸ್ತರಣೆಗೆ ಸಂಬಂಧಪಟ್ಟಂತೆ ಸಭೆ ನಡೆಸಿದ್ದು. ಎಲ್ಲ ರಾಜ್ಯಗಳ ಪರಿಶೀಲನಾ ವರದಿಯನ್ನು ಕೇಳಿದ್ದರು. ಈ ವೇಳೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​ಡೌನ್​ ಮುಂದುವರಿಸಿ ಎಂದು ಮೋದಿಯವರ ಬಳಿ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಕರೊನಾ ಸೋಂಕು ಕಡಿಮೆ ಬಾಧಿಸುತ್ತಿರುವ ಸ್ಥಳಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ಕೊಡಿ ಎಂದಿದ್ದರು.

    ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಪ್ರಮುಖ ಅಧಿಕಾರಿ, ತಜ್ಞರೆಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ ಕೇಂದ್ರ ಸರ್ಕಾರ ಇಂದು ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಿದೆ. ಮೇ 17ರವರೆಗೆ ಲಾಕ್​ಡೌನ್ ಮುಂದುವರಿಸುವುದಾಗಿ ಆದೇಶ ನೀಡಿರುವ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
    ದೇಶವನ್ನು ಈಗಾಗಲೇ ಕರೊನಾ ರೆಡ್​ ಝೋನ್​, ಆರೆಂಜ್​ ಮತ್ತು ಗ್ರೀನ್​ ಝೋನ್​ಗಳನ್ನಾಗಿ ವಿಂಗಡಿಸಲಾಗಿದೆ. ಅತ್ಯಂತ ಹೆಚ್ಚು ಕರೊನಾ ಸೋಂಕು ಬಾಧಿತ ಪ್ರದೇಶಗಳನ್ನು ರೆಡ್​ ಝೋನ್​ ಆಗಿಡಲಾಗಿದ್ದು, ಅತ್ಯಂಕ ಕಡಿಮೆ ಅಥವಾ ಒಂದೂ ಪ್ರಕರಣವಿಲ್ಲದ ಪ್ರದೇಶಗಳನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ.

    ಸದ್ಯ ಗೃಹ ಸಚಿವಾಲಯ ಈ ಝೋನ್​ಗಳಿಗೆ ಅನುಗುಣವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವಲಯ ವಿಂಗಡಣೆ ಹೊರತು ಪಡಿಸಿ ಕೆಲವು ನಿಷೇಧಗಳು ದೇಶಾದ್ಯಂತ ಒಂದೇ ತೆರನಾಗಿ ಮುಂದುವರಿಯಲಿವೆ. ವಿಮಾನ, ರೈಲು, ಮೆಟ್ರೋ ಸಂಚಾರ ದೇಶಾದ್ಯಂತ ಮೇ 17ರವರೆಗೆ ಬಂದ್​ ಇರುತ್ತವೆ. ಹಾಗೇ ರಸ್ತೆ ಮಾರ್ಗದಲ್ಲೂ ಸಹ ಅಂತರ್​ ರಾಜ್ಯ ಸಂಚಾರ ಸಾಧ್ಯವಿಲ್ಲ.

    ಶಿಕ್ಷಣ ಸಂಸ್ಥೆಗಳ ಕಾರ್ಯಾರಂಭ ಇಲ್ಲ: ಇನ್ನು ಯಾವುದೇ ಶಿಕ್ಷಣ ಸಂಸ್ಥೆಗಳನ್ನು ದೇಶಾದ್ಯಂತ ಮೇ 17ರವರೆಗೆ ಪ್ರಾರಂಭ ಮಾಡುವಂತಿಲ್ಲ. ಶಾಲಾಕಾಲೇಜುಗಳು ಸೇರಿ ಇನ್ಯಾವುದೇ ರೀತಿಯ ತರಬೇತಿ ಕೇಂದ್ರಗಳು, ಕೋಚಿಂಗ್​ ಸೆಂಟರ್​ಗಳು ಕಾರ್ಯ ಶುರು ಮಾಡುವಂತಿಲ್ಲ.

    ಹಾಗೇ, ಆತಿಥ್ಯ ಸೇವೆಗಳಾದ ಹೋಟೆಲ್​, ರೆಸ್ಟೊರೆಂಟ್​ಗಳು ತೆರೆಯುವುದಿಲ್ಲ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದಾದ ಸಿನಿಮಾ ಥಿಯೇಟರ್​ಗಳು, ಮಾಲ್​ಗಳು, ಜಿಮ್​ ಸೆಂಟರ್​ಗಳು, ಕ್ರೀಡಾ ಸಂಕೀರ್ಣಗಳು ಮೇ 17ರವರೆಗೆ ಯಾವ ಕಾರಣಕ್ಕೂ ಪ್ರಾರಂಭ ಆಗಬಾರದು.

    ಧಾರ್ಮಿಕ ಕ್ಷೇತ್ರಗಳಲ್ಲೂ ನಿಷೇಧ: ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸೇರಿ ಇನ್ಯಾವುದೇ ಕಾರ್ಯಕ್ರಮಗಳನ್ನು ನಡೆಸಿ, ಅದರ ನೆಪದಲ್ಲಿ ಗುಂಪುಗೂಡಬಾರದು. ಧಾರ್ಮಿಕ ಪ್ರದೇಶಗಳು, ಪ್ರಾರ್ಥನಾ ಸ್ಥಳಗಳೂ ಬಂದ್​ ಇರಬೇಕು.
    ಇನ್ನುಳಿದಂತೆ ಅಗತ್ಯ, ಅನಿವಾರ್ಯ ಇದ್ದಾಗ ಮಾತ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದು, ವಿಮಾನ, ರೈಲು, ರಸ್ತೆ ಮಾರ್ಗದ ಪ್ರಯಾನ ಮಾಡಬೇಕು. ಅದೂ ಕೂಡ ತೀರ ಅನಿವಾರ್ಯ ಇದ್ದರೆ ಮಾತ್ರ.

    ಇನ್ನು ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಇಳಿಯಬಾರದು. ಅದರಲ್ಲೂ ಸಂಜೆ 7ಗಂಟೆಯಿಂದ, ಮುಂಜಾನೆ 7ಗಂಟೆಯವರೆಗೆ ಓಡಾಟಕ್ಕೆ ಸಂಪೂರ್ಣ ನಿಷೇಧವಿದೆ. ಅಂತಹವರ ವಿರುದ್ಧ ಸ್ಥಳೀಯ ಆಡಳಿತಗಳು ಸಂಬಂಧಪಟ್ಟ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ.

    ವೃದ್ಧರು, ಅಸ್ವಸ್ಥರು ಮನೆಯಲ್ಲೇ ಇರಿ: ಹಾಗೇ ಕೆಂಪು, ಕೇಸರಿ ಮತ್ತು ಹಸಿರು ಮೂರು ವಲಯಗಳಲ್ಲಿ 65ವರ್ಷ ಮೇಲ್ಪಟ್ಟವರು, ಅಸ್ವಸ್ಥರು, ಗರ್ಭಿಣಿಯರು, 10 ವರ್ಷ ಒಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಲ್ಲೇ ಇರಬೇಕು. ವೈದ್ಯಕೀಯ ಅಗತ್ಯ ಅಥವಾ ಇನ್ಯಾವುದೇ ತೀರ ಅನಿವಾರ್ಯತೆ ಇದ್ದರೆ ಮನೆಯ ಹೊರಗೆ ಬರಬಹುದಷ್ಟೇ.

    ಇನ್ನು ದೇಶಾದ್ಯಂತ ಮೂರು ವಲಯಗಳಲ್ಲಿ ಎಲ್ಲ ರೀತಿಯ ಆಸ್ಪತ್ರೆಗಳು, ಹೊರರೋಗಿಗಳ ಚಿಕಿತ್ಸೆ ವಿಭಾಗಗಳೂ ಕಾರ್ಯ ನಿರ್ವಹಿಸಲಿವೆ. ಆದರೆ ಅಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆ ಸೇರಿ ಎಲ್ಲ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ. ಆದರೆ, ಕರೊನಾ ತೀವ್ರವಾಗಿ ಬಾಧಿಸುತ್ತಿರುವ ಏರಿಯಾಗಳಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಹೊರ-ರೋಗಿಗಳ ತಪಾಸಣೆಗೆ ಅನುಮತಿ ಇಲ್ಲ. (ಏಜೆನ್ಸೀಸ್​)

    ಮೇ 3ಕ್ಕೆ ಮುಗಿಯೋದಿಲ್ಲ ಲಾಕ್​ಡೌನ್​; ಇನ್ನೂ ಎರಡು ವಾರ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ ಗೃಹ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts