

ಬೆಂಗಳೂರು: ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗೆ ಮಣಿದಿರುವ ಸಾರಿಗೆ ಇಲಾಖೆ, ವೇತನ ಪರಿಷ್ಕರಣೆ ಮಾಡಿದೆ. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶೇಕಡಾ 15ರಷ್ಟು ವೇತನ ಹೆಚ್ಚಳ ಮಾಡುವಕ್ಕೆ ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ನಮ್ಮ ಸರ್ಕಾರ ಮಾಡಿದೆ. ಈ ನಿರ್ಧಾರದಿಂದ ವಾರ್ಷಿಕ 4 ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು ರೂ.550 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ನಮ್ಮ ಸರ್ಕಾರ ಸಾರಿಗೆ ಸಿಬ್ಬಂದಿಗಳ ಪರವಾಗಿದೆ. ಕಷ್ಟ ಕಾಲದಲ್ಲೂ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಕೆಲಸ ಮಾಡಿದ್ದೇವೆ. ಇದೀಗ ನಿಮ್ಮ ಪರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿ ಜನಸೇವೆ ಮುಂದುವರಿಸೋಣ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ವೇತನ ಹೆಚ್ಚಳ ಬಹುದಿನಗಳ ಬೇಡಿಕೆಯಾಗಿದ್ದು, ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು, ಕಾರ್ಮಿಕ ಮುಖಂಡರುಗಳೊಡನೆ ನಿರಂತರ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮುಖ್ಯಮಂತ್ರಿಗಳು ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ಆದೇಶ ಸಧ್ಯದಲ್ಲೇ ಹೊರಬೀಳಲಿದೆ.