ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕೇಂದ್ರದ ಸೂಚನೆಗೆ ಕಾಯುತ್ತಿರುವ ರಾಜ್ಯ

Farm Cartoon
Published on

ಬೆಂಗಳೂರು: ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿದ್ದು, ರಾಜ್ಯದಲ್ಲಿಯೂ ಎರಡು ಕಾಯ್ದೆಗಳಿಗೆ ಆಗಿರುವ ತಿದ್ದುಪಡಿಗಳನ್ನು ಹಿಂಪಡೆಯುವ ಬಗ್ಗೆ ಕೇಂದ್ರದ ಸೂಚನೆಗೆ ಸರ್ಕಾರ ಕಾಯುತ್ತಿದೆ. ಆದರೆ ರೈತರು ಮಾತ್ರ ಹೋರಾಟ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆದರೆ ಕೇಂದ್ರದ ಸೂಚನೆ ಇಲ್ಲದಿದ್ದರೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆ ಮೂಲಕ ಭೂ ಸುಧಾರಣಾ ಕಾಯ್ದೆಯ ಮೂಲಉದ್ದೇಶವನ್ನೇ ಸರ್ಕಾರ ದಮನ ಮಾಡಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಕಂಪನಿ ಕೃಷಿಗೆ ಪೂರಕವಾಗಿಯೇ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ತಂದಿದೆ ಎಂಬ ಆಕ್ರೋಶ ರೈತರಿಂದ ವ್ಯಕ್ತವಾಗಿತ್ತು. ರೈತರು ರಾಜ್ಯದಲ್ಲಿಯೂ ಆಗಾಗ ಹೋರಾಟ ನಡೆಸುತ್ತಿದ್ದರು. ದೆಹಲಿಗೂ ತೆರಳಿ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಬಂದಿದ್ದರು.

ಆಗಿದ್ದ ತಿದ್ದುಪಡಿಗಳೇನು?: ಭೂ ಸುಧಾರಣಾ ಕಾಯ್ದೆಗೆ ಎರಡು ತಿದ್ದುಪಡಿಗಳನ್ನು ತರಲಾಗಿತ್ತು. ಭೂಮಿ ಖರೀದಿಗೆ ಇದ್ದ ಮಿತಿಯನ್ನು ತೆಗೆದು ಹಾಕಲಾಗಿತ್ತು. ಇದರಿಂದ ಯಾರು ಎಷ್ಟು ಬೇಕಾದರೂ ಭೂಮಿ ಖರೀದಿ ಮಾಡಲು ಅವಕಾಶ ನೀಡಲಾಗಿತ್ತು. ಇದರ ಜತೆಗೆ ಕೃಷಿಯೇತರರು ಕೃಷಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.

ಕೃಷಿ ಮಾರುಕಟ್ಟೆ ಕಾಯ್ದೆಗೆ ತಂದ ತಿದ್ದುಪಡಿಯಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಬಹುದು, ಅದೇ ರೀತಿಯಲ್ಲಿ ಲೈಸನ್ಸ್ ಇಲ್ಲದೇ ಯಾರು ಬೇಕಾದರೂ ಖರೀದಿ ಮಾಡಬಹುದೆಂಬುದು ತಿದ್ದುಪಡಿ ಮಾಡಲಾಗಿದೆ.

ತಿದ್ದುಪಡಿ ಚರ್ಚೆ: ಕೇಂದ್ರ ಸರ್ಕಾರ ವಾಪಾಸು ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ವಾಪಾಸು ಪಡೆಯುವ ಚರ್ಚೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಚಿಂತನೆ ಮಾಡುವುದಾಗಿ ಹೇಳಿದ್ದಾರೆ.

ಸುಗ್ರೀವಾಜ್ಞೆ: ಸರ್ಕಾರದ ಉನ್ನತ ಮೂಲಗಳ ಪ್ರಕಾರ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ಮೂಲಕ ಸುಗ್ರೀವಾಜ್ಞೆ ತಂದು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

  • ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ
  • ಸುಗ್ರೀವಾಜ್ಞೆಯ ಮೂಲಕ ಹಿಂದಕ್ಕೆ ಪಡೆಯುವ ಚರ್ಚೆ
  • ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಸಾಧ್ಯತೆ
  • ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ

ಭೂ ಸುಧಾರಣೆ ತಿದ್ದುಪಡಿಗೆ ಕೇಂದ್ರ ಸೂಚನೆ ನೀಡಿರಲಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮಾತ್ರ ತಿಳಿಸಿತ್ತು. ಕೇಂದ್ರದಿಂದ ಈಗ ಯಾವ ರೀತಿಯ ಸಲಹೆ ಬರುವುದೋ ಆ ಸಲಹೆಯನ್ನು ರಾಜ್ಯ ಪಾಲಿಸಲಿದೆ.

| ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

ರೈತರ ಹೋರಾಟವನ್ನು ಲಘುವಾಗಿ ಪರಿಗಣಿಸಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಆದರೆ ನಮ್ಮ ಹೋರಾಟ ಮುಂದುವರಿಯಲಿದೆ. ರಾಜ್ಯದಲ್ಲಿ ಎರಡು ಕಾಯ್ದೆಗಳ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯಲೇಬೇಕು.

| ಜೆ.ಸಿ. ಬಯ್ಯಾರೆಡ್ಡಿ ಅಧ್ಯಕ್ಷ, ಪ್ರಾಂತ ರೈತ ಸಂಘ

ಕೇಂದ್ರ ಸರ್ಕಾರ ಮಾಡಿದ್ದ ತಪ್ಪಿಗೆ ಈಗ ಪ್ರಾಯಶ್ಚಿತ ಮಾಡಿಕೊಂಡಿದೆ. ರೈತರ ಹೋರಾಟ ಎಲ್ಲ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆ. ಎಂಎಸ್​ಪಿಯನ್ನು ಎಲ್ಲ ಬೆಲೆಗಳಿಗೂ ನೀಡಲೇಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ತರಬಾರದು.

| ಕುರುಬೂರು ಶಾಂತಕುಮಾರ್ ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಸ್ವಾಗತಾರ್ಹ. ಇಲ್ಲಿ ಸೋಲು-ಗೆಲುವಿಗಿಂತ ಒಬ್ಬ ಜನಪರ ಕಾಳಜಿಯ ನೇತಾರನ ಕಳಕಳಿ ಕಾಣುತ್ತದೆ. 14 ತಿಂಗಳಿಂದ ರೈತರು ಹೋರಾಟ ನಿರತರಾಗಿದ್ದರು. ನಾವು ಕೂಡ ಹೋರಾಟವನ್ನು ಬೆಂಬಲಿಸಿದ್ದೆವು. ಗುರುನಾನಕ್ ಜಯಂತಿಯಂದು ಕಾಯ್ದೆ ವಾಪಸ್ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಟ್ಟಿಗೆ ಬೆಳೆಗೆ ಸೂಕ್ತ ಬೆಲೆ, ವಿದ್ಯುತ್ ನೀಡಲು ಕೇಂದ್ರ, ರಾಜ್ಯ ಸರ್ಕಾರಗಳು ನೀತಿ ಜಾರಿಗೊಳಿಸಬೇಕು.

| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ಮಠ, ಚಿತ್ರದುರ್ಗ ಜಿಲ್ಲೆ

ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ಕಾನೂನುಗಳನ್ನು ಹಿಂಪಡೆಯಬೇಕು ಅಥವಾ ಸರ್ಕಾರವು ಸಂಸತ್​ನಲ್ಲಿ ಕಾನೂನು ಹಿಂಪಡೆಯುವ ಮಸೂದೆ ಮಂಡಿಸಿ ಅಂಗೀಕರಿಸಿದ ಬಳಿಕವಷ್ಟೇ ಸುಪ್ರೀಂ ಕೋರ್ಟ್​ನಲ್ಲಿರುವ ದಾವೆಗಳು ನಿಷ್ಪ›ಯೋಜಕವಾಗುತ್ತವೆ.

| ರಾಕೇಶ್ ದ್ವಿವೇದಿ ಹಿರಿಯ ನ್ಯಾಯವಾದಿ

ಪ್ರಮುಖ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಯಾವುದೇ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೀರ್ವನಿಸಿಲ್ಲ. ಸ್ವಲ್ಪ ತಡವಾದರೂ ಇದು ಐತಿಹಾಸಿಕ ತೀರ್ವನ. ಯಾವುದೇ ಪ್ರತಿಷ್ಠೆಗೆ ಬೀಳದೇ ಪ್ರಧಾನಿಯವರು ನಿರ್ಧಾರ ಪ್ರಕಟಿಸಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದ್ದು, ರೈತ ಹೋರಾಟಕ್ಕೆ ಸಂದ ಜಯವಾಗಿದೆ.

| ಬಡಗಲಪುರ ನಾಗೇಂದ್ರ ಕರ್ನಾಟಕ ರೈತ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net