ಶಿಕ್ಷಣಕ್ಕೆ ಸ್ಟಾರ್ಸ್; ಹೊಸ ಯೋಜನೆಗೆ ಸಂಪುಟ ಸಮ್ಮತಿ

Stars
Published on

ನವದೆಹಲಿ: ಇತ್ತೀಚೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್​ಇಪಿ)ಯನ್ನು ಅಂತಿಮಗೊಳಿಸಿದ್ದ ಕೇಂದ್ರ ಸರ್ಕಾರ, ಈಗ ಶಾಲಾ ಶಿಕ್ಷಣ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮುಂದಾಗಿದೆ. ಬೋಧನೆ-ಕಲಿಕೆ ಮತ್ತು ರಾಜ್ಯಗಳ ಫಲಿತಾಂಶ ಬಲಪಡಿಸುವಿಕೆ (ಸ್ಟಾರ್ಸ್) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಅಂದಾಜು 5,718 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು. ಹೊಸ ಶಿಕ್ಷಣ ನೀತಿ ಭಾಗವಾಗಿ ಈ ಯೋಜನೆಯೂ ಜಾರಿಯಾಗಲಿದೆ. ಇದಕ್ಕೆ ವಿಶ್ವಬ್ಯಾಂಕ್​ನಿಂದ 3,700 ಕೋಟಿ ರೂ. ನೆರವು ಲಭ್ಯವಾಗಲಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ. ಕಂಟಿಂಜೆನ್ಸಿ ಎಮರ್ಜೆನ್ಸಿ ರೆಸ್ಪಾನ್ಸ್ ಕಾಂಪೊನೆಂಟ್ (ಸಿಇಆರ್​ಸಿ) ಎಂಬ ಮತ್ತೊಂದು ಯೋಜನೆ ಕೂಡ ಇದರಲ್ಲಿ ಅಡಕವಾಗಿದೆ.

ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಪ್ರಾಕೃತಿಕ, ಮಾನವ-ನಿರ್ವಿುತ ಅಥವಾ ಆರೋಗ್ಯ ಸಂಬಂಧಿ ಅನಾಹುತಗಳಾದರೆ ತುರ್ತಾಗಿ ಸ್ಪಂದಿಸುವುದು, ಶಿಕ್ಷಣದ ಗುಣಮಟ್ಟ, ಫಲಿತಾಂಶ ಸುಧಾರಿಸುವುದು ಹಾಗೂ ಕಾರ್ವಿುಕ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಕೌಶಲ ಬೆಳೆಸುವುದು ಇದರ ಉದ್ದೇಶ.

ಲಡಾಖ್​ಗೆ ವಿಶೇಷ ಪ್ಯಾಕೇಜ್: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್​ಆರ್​ಎಲ್​ಎಂ) ಅನ್ವಯ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ 520 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್​ಗೆ ಸಂಪುಟ ಅನುಮೋದನೆ ನೀಡಿದೆ. ದೀನದಯಾಳ್ ಅಂತ್ಯೋದಯ ಯೋಜನೆ (ಡಿಎವೈ) -ಎನ್​ಆರ್​ಎಲ್​ಎಂ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಾಕಷ್ಟು ನೆರವು ಒದಗಿಸಲಾಗುತ್ತದೆ.

ಪ್ರಯೋಜನ ಏನು?
  • ಶೈಕ್ಷಣಿಕ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ
  • ಶಿಕ್ಷಣ ಗುಣಮಟ್ಟ ಹೆಚ್ಚಳ
  • ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ವಿದ್ಯಾರ್ಥಿಗಳ ಕೌಶಲ ವೃದ್ಧಿ
  • ಶಿಕ್ಷಕರಿಗೂ ಹೆಚ್ಚಿನ ತರಬೇತಿ
ಫಲಾನುಭವಿಗಳು
  • 25 ಕೋಟಿ ವಿದ್ಯಾರ್ಥಿಗಳು
  • 15 ಲಕ್ಷ ಶಾಲೆಗಳು
  • 1 ಕೋಟಿ ಶಿಕ್ಷಕರು
ಪರಾಖ್ ಸ್ಥಾಪನೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಡಿ ‘ಪರಾಖ್’ ಎಂಬ ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸಲಾಗುತ್ತದೆ. ಯೋಜನೆಗೆ ಆಯ್ಕೆಯಾದ ರಾಜ್ಯಗಳು ತಮ್ಮ ಅನುಭವಗಳನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ಒಡಿಶಾಗಳಲ್ಲಿ ಯೋಜನೆ ಮೊದಲು ಅನುಷ್ಠಾನವಾಗಲಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅನುದಾನಿತ ಇದೇ ರೀತಿಯ ಇನ್ನೊಂದು ಯೋಜನೆ ಗುಜರಾತ್, ತಮಿಳುನಾಡು, ಉತ್ತರಾಖಂಡ, ಜಾರ್ಖಂಡ ಮತ್ತು ಅಸ್ಸಾಂನಲ್ಲಿ ಅನುಷ್ಠಾನಗೊಳ್ಳಲಿದೆ.

ಸಂಪುಟದ ಇತರ ನಿರ್ಧಾರಗಳು
  1. ದೇಶದ ಮೂರು ಪ್ರಮುಖ ಭೂಗತ ತೈಲ ಸಂಗ್ರಹಾಗಾರಗಳಲ್ಲಿ ತೈಲ ಸಂಗ್ರಹಕ್ಕೆ 3,874 ಕೋಟಿ ರೂಪಾಯಿ ವೆಚ್ಚ ಮಾಡಲು ಕೇಂದ್ರ ಸಂಪುಟ ಅನುಮೋದನೆ. ಕರ್ನಾಟಕದ ಮಂಗಳೂರು, ಪಾದೂರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಸಂಗ್ರಹಾಗಾರಗಳಿವೆ.
  2. ನಿರ್ಮಾಣ ಹಂತದಲ್ಲಿರುವ ನಗರ್​ನಾರ್ ಉಕ್ಕು ಸ್ಥಾವರವನ್ನು ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕ ಗೊಳಿಸುವುದು
  3. ಅಂತರ್ಜಲ ನಿರ್ವಹಣೆಯಲ್ಲಿ ಆಸ್ಟ್ರೇಲಿಯಾ ಜತೆ ಪರಸ್ಪರ ಸಹಕಾರದ ಒಡಂಬಡಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net