ಮೈಸೂರು ದಸರಾ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗ ಈ ಸಲ ರದ್ದು..

Dasara
Published on

ಮೈಸೂರು: ವಿಜಯದಶಮಿ ದಿನದಂದು ಪ್ರತಿವರ್ಷ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗವನ್ನು ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ. ನವರಾತ್ರಿ ಉತ್ಸವ ನಡೆದರೂ ವಜ್ರಮುಷ್ಠಿ ಕಾಳಗ ನಡೆಯದೆ ಇರುವುದು ಇತಿಹಾಸದಲ್ಲಿ ಇದು ಪ್ರಥಮ ಬಾರಿಯಾಗಿದೆ.

ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮದ ಮಾದರಿಯಲ್ಲಿಯೇ ಮೈಸೂರು ರಾಜಮನೆತನದವರು ಸಹ ಅರಮನೆಯಲ್ಲಿ ನಡೆಸುವ ನವರಾತ್ರಿ ಉತ್ಸವಕ್ಕೆ ಹಲವು ನಿರ್ಬಂಧ ಹೇರಿದ್ದಾರೆ. ನವರಾತ್ರಿ ಉತ್ಸವ, ಖಾಸಗಿ ದರ್ಬಾರ್​ಗೆ ಆಯ್ದ ಕೆಲವರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ನೀಡಲು ತೀರ್ವನಿಸಿದ್ದಾರೆ. ಅಲ್ಲದೆ, ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅಂಬಾರಿ ತಾಲೀಮು ಬಿರುಸು: ದಸರಾ ಗಜಪಡೆ ತಾಲೀಮು ಬಿರುಸುಗೊಂಡಿದ್ದು, ಮಂಗಳವಾರ ಗೋಪಿ ಆನೆಯು 500 ಕೆ.ಜಿ. ಭಾರ ಹೊತ್ತು ತಾಲೀಮು ನಡೆಸಿತು. ಬುಧವಾರ ಅಂಬಾರಿ ಆನೆ ಅಭಿಮನ್ಯು 600 ಕೆ.ಜಿ. ಭಾರ ಹೊರುವ ತಾಲೀಮು ನಡೆಸಲಿದೆ. ಒಂದೆರಡು ದಿನಗಳಲ್ಲಿ ಮರದ ಅಂಬಾರಿ ಹೊರುವ ತಾಲೀಮು ಕೈಗೊಳ್ಳಲಾಗುವುದು ಎಂದು ದಸರಾ ಗಜಪಡೆ ಉಸ್ತುವಾರಿ ವಹಿಸಿಕೊಂಡಿರುವ ಡಾ.ನಾಗರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.

ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿ ಮೆರವಣಿಗೆಗೆ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಯನ್ನು ಸಜ್ಜುಗೊಳಿಸುವ ಕಾರ್ಯ ಮಂಗಳವಾರ ಚಾಮುಂಡಿಬೆಟ್ಟದಲ್ಲಿ ನಡೆಯಿತು. ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಶ್ವರೋಹಿದಳ ಅರಮನೆ ಆವರಣದಲ್ಲಿ ತಾಲೀಮು ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net