ಜಿಯೊದಿಂದ ಭಾರತದಲ್ಲಿ ಸ್ಟಾರ್​ಲಿಂಕ್ ರೀತಿ ಸೇವೆ; ಪ್ರಧಾನಿ ಮೋದಿಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದ ಆಕಾಶ್ ಅಂಬಾನಿ

Akash Ananth and Isha Ambani
ಆಕಾಶ್, ಅನಂತ್, ಇಶಾ ಅಂಬಾನಿ
Published on

ನವದೆಹಲಿ: ಎಲನ್ ಮಸ್ಕ್ ಮಾಲೀಕತ್ವದ ಸ್ಟಾರ್​ಲಿಂಕ್ ರೀತಿಯ ಸೇವೆಯನ್ನು ಭಾರತದಲ್ಲಿ ಒದಗಿಸಲು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸನ್ನದ್ಧವಾಗಿದೆ. ಅಂಬಾನಿ ಇತ್ತೀಚೆಗೆ ರಿಲಯನ್ಸ್ ಜಿಯೋ ಏರ್​ಫೈಬರ್ ಆರಂಭವನ್ನು ಪ್ರಕಟಿಸಿತ್ತು. ಇದೀಗ ಸ್ಟಾರ್​ಲಿಂಕ್​ನಂಥ ಉಪಗ್ರಹ ಬ್ರಾಡ್​ಬ್ಯಾಂಡ್ ಸೇವೆಯನ್ನು ಒದಗಿಸಲು ಸಜ್ಜುಗೊಳ್ಳುತ್ತಿದೆ.

ಜಿಯೋಸ್ಪೇಸ್​ಫೈಬರ್ ಎಂದು ಕರೆಯಲಾಗುವ ಈ ಸೇವೆಯು ಭಾರತದಲ್ಲಿ ಈ ರೀತಿಯ ಪ್ರಥಮ ಉಪಗ್ರಹ-ಆಧಾರಿತ ಗಿಗಾಬಿಟ್ ಫೈಬರ್ ಸೇವೆಯಾಗಲಿದೆ. ದೇಶದೊಳಗೆ ಈ ಮುಂಚೆ ಲಭ್ಯವಾಗದಿದ್ದ ಭೌಗೋಳಿಕ ಪ್ರದೇಶಗಳಲ್ಲಿ ಕೂಡ ಹೈ ಸ್ಪೀಡ್ ಬ್ರಾಡ್​ಬ್ಯಾಂಡ್ ಸೇವೆಗಳನ್ನು ಇದು ಒದಗಿಸಲಿದೆ. ಅಂಬಾನಿ ಪುತ್ರ ಹಾಗೂ ರಿಲಯನ್ಸ್ ಜಿಯೋ ಇನ್ಪೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ, ನವದೆಹಲಿಯಲ್ಲಿ ಭಾರತ ಮೊಬೈಲ್ ಕಾಂಗ್ರೆಸ್​ನಲ್ಲಿ (ಐಎಂಸಿ) ಪ್ರಧಾನಿ ನರೇಂದ್ರ ಮೋದಿಯವರಿಗೆ ಉಪಗ್ರಹ ಆಧಾರಿತ ಇಂಟರ್​ನೆಟ್ ಸೇವೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಭಾರತದಲ್ಲಿ ಲಕ್ಷಗಟ್ಟಲೆ ಮನೆಗಳು ಮತ್ತು ವ್ಯವಹಾರಸ್ಥರಿಗೆ ಮೊದಲ ಬಾರಿಗೆ ಬ್ರಾಡ್​ಬ್ಯಾಂಡ್ ಇಂಟರ್​ನೆಟ್ ಅನುಭವವನ್ನು ಜಿಯೋ ಒದಗಿಸಿತ್ತು. ಈಗ ಜಿಯೋಸ್ಪೇಸ್​ಫೈಬರ್​ನೊಂದಿಗೆ ಇನ್ನೂ ಸಂಪರ್ಕ ಸಾಧ್ಯವಾಗದ ಮಿಲಿಯಾಂತರ ಜನರಿಗೆ ತಲುಪಲು ಉದ್ದೇಶಿಸಲಾಗಿದೆ ಎಂದು ಆಕಾಶ್ ಹೇಳಿದ್ದಾರೆ. ಪ್ರತಿಯೊಬ್ಬರೂ ಎಲ್ಲಿಂದಲೇ ಆದರೂ ಹೊಸ ಡಿಜಿಟಲ್ ಸಮಾಜದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಜಿಯೋಸ್ಪೇಸ್​ಫೈಬರ್ ಗಿಗಾಬಿಟ್ ಮೂಲಕ ಅವಕಾಶ ಕಲ್ಪಿಸಲಿದೆ ಎಂದು ಅವರು ವಿವರಿಸಿದ್ದಾರೆ.

ರಿಲಯನ್ಸ್ ಮಂಡಳಿಗೆ ಮುಕೇಶ್ ಮಕ್ಕಳು

ನವದೆಹಲಿ: ರಿಲಯನ್ಸ್ ಕೈಗಾರಿಕೆಗಳ ಸಮೂಹದ ನಿರ್ದೇಶಕರ ಮಂಡಳಿಗೆ ಅಧ್ಯಕ್ಷ ಮುಕೇಶ್ ಅಂಬಾನಿಯ ಮೂವರು ಮಕ್ಕಳ ಸೇರ್ಪಡೆ ಅಧಿಕೃತಗೊಳ್ಳುವ ಮೂಲಕ ಶುಕ್ರವಾರ ಈ ಉದ್ಯಮ ಸಾಮ್ರಾಜ್ಯದಲ್ಲಿ ಹೊಸ ಯುಗ ಆರಂಭವಾಗಿದೆ. ಅವಳಿ ಮಕ್ಕಳಾದ ಇಶಾ ಮತ್ತು ಆಕಾಶ್ (32 ವರ್ಷ) ಅವರಿಗೆ ಕಂಪನಿಯ ಷೇರುದಾರರ ಶೇಕಡ 98 ಮತಗಳು ದೊರೆತರೆ ಇನ್ನೊಬ್ಬ ಪುತ್ರ ಅನಂತ್ (28) ಶೇ. 92.7 ಮತ ಗಳಿಸಿದರು ಎಂದು ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಮೂವರೂ ಮಕ್ಕಳು ಕಳೆದ ಕೆಲವು ವರ್ಷಗಳಿಂದ ರಿಲಯನ್ಸ್ ಸಮೂಹದ ಪ್ರಮುಖ ಉದ್ಯಮಗಳ ವ್ಯವಹಾರಗಳಲ್ಲಿ ನಿಕಟವಾಗಿ ಭಾಗಿಯಾಗಿದ್ದರು.

ಮುಂದಿನ ಐದು ವರ್ಷ ಅಧ್ಯಕ್ಷರಾಗಿದ್ದು ಮಕ್ಕಳನ್ನು ಸಮೂಹದ ವಾರಸುದಾರರನ್ನಾಗಿ ಬೆಳೆಸಲು ಶ್ರಮಿಸುವುದಾಗಿ 66 ವರ್ಷದ ಮುಕೇಶ್ ಅಂಬಾನಿ ಹೇಳಿದ್ದಾರೆ. ಡಿಜಿಟಲ್, ಗ್ರಾಹಕ ವಸ್ತುಗಳು ಮತ್ತು ಇಂಧನ ಕ್ಷೇತ್ರದ ಬೃಹತ್ ಕಂಪನಿಯಾಗಿ ಪರಿವರ್ತನೆ ಹೊಂದಿದ ಸಮೂಹದ ಹೊಣೆಯನ್ನು ಮಕ್ಕಳಿಗೆ ವಹಿಸುವುದಾಗಿ ತಿಳಿಸಿದ್ದಾರೆ.ಸ್ಟಾನ್​ಫೋರ್ಡ್ ವಿಶ್ವ ವಿದ್ಯಾಲಯದ ಎಂಬಿಎ ಪದವೀಧರೆಯಾಗಿರುವ ಇಶಾ ಅಂಬಾನಿ ರಿಲಯನ್ಸ್ ರೀಟೇಲ್ ವ್ಯವಹಾರದ ಮುಖ್ಯಸ್ಥೆಯಾಗಿದ್ದಾರೆ. ಇಶಾರ ಅವಳಿ ಸೋದರ ಆಕಾಶ್ ಅವರಿಗೆ ಕಳೆದ ವರ್ಷ ಜೂನ್​ನಲ್ಲಿ ರಿಲಯನ್ಸ್ ಜಿಯೋ ಇನ್ಪೋಕಾಮ್ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿತ್ತು. 28 ವರ್ಷದ ಅನಂತ್, ಸಮೂಹದ ನವೀಕರಿಬಹುದಾದ ಇಂಧನ ವಿಭಾಗದೊಂದಿಗೆ ಸಂಬಂಧ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net