

RCB: ಕಾಲ್ತುಳಿತ ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗುವ ಮೊದಲು ಮನುಷ್ಯ. ಮಕ್ಕಳನ್ನು ಕಳೆದುಕೊಂಡ ದುಃಖದ ಭಾರ ಏನು ಎಂಬ ಅರಿವು ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ RCB ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ. ಮುಖ್ಯಮಂತ್ರಿಯಾಗದೇ ಇದ್ದಿದ್ದರೂ ಸಹ ಮನುಷ್ಯನಾದ ಕಾರಣಕ್ಕೆ ನನ್ನನ್ನು ದುಃಖಿತನನ್ನಾಗಿ ಮಾಡುತ್ತಿತ್ತು ಎಂಬುದನ್ನು ಅಂತಃಕರಣ ಪೂರ್ವಕವಾಗಿ ತಿಳಿಸಬಯಸುತ್ತೇನೆ ಎಂದರು.
ವ್ಯವಸ್ಥೆಯಲ್ಲಿನ ಲೋಪಗಳಿಂದ ವಿನಾಕಾರಣ ದುರಂತಕ್ಕೀಡಾದ ಮಕ್ಕಳಾಗಲಿ, ಕುಟುಂಬಗಳ ಸದಸ್ಯರಾಗಲಿ ಬದುಕಿರುವವನ್ನು ಶಾಶ್ವತ ದುಃಖದಲ್ಲಿ ಮುಳುಗಿಸುತ್ತವೆ. ಮಕ್ಕಳು ಬದುಕಿದ್ದರೆ ಯಾರ್ಯಾರು ಯಾವ ಯಾವ ಸಾಧನೆ ಮಾಡುತ್ತಿದ್ದರೋ ಯಾರಿಗೆ ಗೊತ್ತು? ಸುರೇಶ್‌ಕುಮಾರ್ ಅವರು ಸರ್ಕಾರವನ್ನು ಅಬೆಟರ್ ಎಂದು ಕರೆದರು. ಅವರು ಹಾಗೆ ಕರೆದದ್ದು ತಪ್ಪು ಸರಿಯೋ ಸದಸ್ಯರು ಮತ್ತು ಜನರು ತೀರ್ಮಾನಿಸುತ್ತಾರೆ. ನಾವು ಆಡಳಿತ ಪಕ್ಷದಲ್ಲಿ ಇರುವ ಕಾರಣ ನೀವು ಟೀಕೆ ಮಾಡುವುದು ಸಹಜ ಎಂದರು.
ಯಾವ ಯಾವ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣಗಳು ಸಂಭವಿಸಿವೆ ಎಂದು ನೋಡಿದೆ. ಸಾಮಾನ್ಯವಾಗಿ 3 ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಧಾರ್ಮಿಕ ಸ್ಥಳಗಳಲ್ಲಿ ಸೇರುವ ಜನಜಂಗುಳಿ, ಕ್ರೀಡೆ ಅಥವಾ ಇನ್ಯಾವುದೇ ರೀತಿಯ ಸೆಲಬ್ರೇಶನ್‌ಗಳು ಅಥವಾ ಶೋಕಾಚರಣೆಗಳ ಸಂದರ್ಭದಲ್ಲಿ ಮತ್ತು ಭಯದಿಂದ ತಪ್ಪಿಸಿಕೊಂಡು ಓಡುವಾಗ ಕಾಲ್ತುಳಿತಗಳಾಗಿವೆ.2022 ಮತ್ತು 2025 ರಲ್ಲಿ ಗುಜರಾತ್ ಮುಂತಾದ ಕಡೆ ಸೇತುವೆಗಳು ಕುಸಿದು ನೂರಾರು ಜನ ಮರಣ ಹೊಂದಿದ್ದಾರೆ ಎಂದರು.
RCB ಬೆಂಗಳೂರಿನ ಅಸ್ಮಿತೆ ಅಷ್ಟೆ ಅಲ್ಲ. ಕರ್ನಾಟಕದ ಅಸ್ಮಿತೆ ಎಂಬ0ತೆ ಮಾಡಲಾಯಿತು. ಹಾಗಾಗಿ RCB ಗೆದ್ದಾಗ ಫೆಲಿಸಿಟೇಟ್ ಮಾಡಲಿಲ್ಲ ಎಂದರೆ ಕನ್ನಡಿಗರ ಭಾವನೆಗಳಿಗೆ ಮಾಡಿದ ಅವಮಾನ ಎಂಬ0ತೆ ಬಿಂಬಿಸಲು ಪ್ರಯತ್ನಿಸಲಾಯಿತು. ಹಾಗಾಗಿ ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆ ಕೂಡ ಎಂದರು.