ಮಡಿವಾಳ ಸಮಾಜ ಎಸ್‌ಟಿಗೆ ಸೇರ್ಪಡೆ ಮಾಡಿ; ಬಸವ ಮಾಚಿದೇವ ಸ್ವಾಮೀಜಿ ಒತ್ತಾಯ

MADIVALA SAMAVESHA
ವಿಜಯಪುರ ನಗರದಲ್ಲಿ ನಡೆದ ಮನೆ ಮನೆಗೆ ಮಾಚಿದೇವ ಹಾಗೂ ಮಡಿವಾಳ ಸಮಾಜದ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮ.
Published on

ವಿಜಯಪುರ: ಕುಲಕಸುಬು ಆಧಾರಿತ ಮಡಿವಾಳ ಸಣ್ಣ ಸಮಾಜವಾಗಿದೆ. ಪ್ರವರ್ಗ 2ಎ ನಲ್ಲಿರುವ ಸಮಾಜವನ್ನು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.

ನಗರದ ಎಸ್‌ಎಸ್ ರಸ್ತೆಯ ಸಿದ್ಧೇಶ್ವರ ಕಲಾಭವನದಲ್ಲಿ ಶ್ರಾವಣ ಮಾಸದ ನಿಮಿತ್ತ ಜಿಲ್ಲಾ ಮಡಿವಾಳ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಮನೆ ಮನೆಗೆ ಮಾಚಿದೇವ’ ಕಾರ್ಯಕ್ರಮ ಹಾಗೂ ಜಿಲ್ಲಾ ಸಮಾವೇಶದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಮಡಿವಾಳ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅತಿ ಹಿಂದುಳಿದಿದೆ. ನಮ್ಮ ಸಮಾಜದ ಒಬ್ಬರೂ ಶಾಸಕರು, ಸಂಸದರು ಇಲ್ಲ. ರಾಜಕೀಯ ಪಕ್ಷಗಳು ಮಡಿವಾಳ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಸಣ್ಣ ಸಮುದಾಯವೆಂದು ನಿರ್ಲಕ್ಷೃ ಮಾಡಿದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದರು.

ಜಿಲ್ಲಾ ಮಡಿವಾಳ ಸಂಘದ ಸದಸ್ಯರು ಒಗ್ಗಟ್ಟಿನಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಬೇಕು. ಅರ್ಹರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪಾಲಿಕೆ ಮೇಯರ್ ಎಂ.ಎಸ್. ಕರಡಿ ಉದ್ಘಾಟಿಸಿದರು. ಉಪ ಮೇಯರ್ ಸುಮಿತ್ರಾ ಜಾಧವ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ, ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ, ಮಡಿವಾಳ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಎಂ.ಕೆ. ಹನುಮಂತಪ್ಪ, ಗುತ್ತಿಗೆದಾರ ದುರ್ಗೇಶ ಮಡಿವಾಳ, ಮುಖಂಡರಾದ ದ್ಯಾಮಣ್ಣ ಮಡಿವಾಳ, ನಿಂಬಣ್ಣ ಮಡಿವಾಳ, ಶ್ರೀಶೈಲ ಅಗಸರ (ತಿಗಣಿಬಿದರಿ), ಸಾಯಿಬಣ್ಣ ಮಡಿವಾಳ, ಪ್ರಭು ಮಡಿವಾಳ, ಬಾಬು ಬಳ್ಳಾರಿ, ಮಲ್ಲಣ್ಣ ಅಣೆಪ್ಪನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net