

ಬೆಂಗಳೂರು: ಹೊಸದಾಗಿ ಸ್ಥಿರಾಸ್ತಿ ಖರೀದಿ ಮತ್ತು ಒಪ್ಪಂದ ಮಾಡಿಕೊಳ್ಳುವರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಇತ್ತೀಚೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿತ್ತು. ಪರಿಣಾಮ ನೋಂದಣಿ ಶುಲ್ಕ ಸಹ ಹೆಚ್ಚಳವಾಗಿತ್ತು. ಇದೀಗ ಮುದ್ರಾಂಕ ಶುಲ್ಕವನ್ನು ಶೇ.0.1 ರಿಂದ 0.5ಕ್ಕೆ ಏರಿಕೆ ಮಾಡಿದ್ದು, ಕಂದಾಯ ಇಲಾಖೆ ಕಾಯ್ದೆಗೆ ತಿದ್ದುಪಡಿ ತರಲಿದೆ. ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ, ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ-2023 ಅನ್ನು ಗುರುವಾರ ಮಂಡಿಸಿದರು. ಜನವರಿಂದ 1 ರಿಂದ ರಾಜ್ಯ ವ್ಯಾಪಿ ಜಾರಿಗೆ ಬರಲಿದೆ.
ವಿಧೇಯಕದಲ್ಲಿ ದತ್ತು ಪತ್ರ, ಅಫಿಡವಿಟ್, ಒಪ್ಪಂಡ ಅಥವಾ ಅದರ ದಾಖಲೆ ಪತ್ರ, ಕ್ರಯ ಪತ್ರ ನೋಂದಣಿ, ಸರ್ಟಿಫಿಕೇಟ್ ಪತ್ರ, ಹಸ್ತಾಂತರ ಪತ್ರ, ಕಂಪನಿಯ ಸಂಘದ ಜ್ಞಾಪನಾ ಪತ್ರ, ಪಾಲುದಾರರಿಗೆ ಮರು ರಚನೆ, ಸೀಮಿತ ಹೊಣೆಗಾರಿಕೆ ಪಾಲುದಾರಿಗೆ ಶುಲ್ಕ ದರವನ್ನು ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮುದ್ರಾಂಕ ಶುಲ್ಕ ಪರಿಷ್ಕರಣೆಯಾಗಲಿದೆ.
ನೆರೆಯ ರಾತ್ರಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ, ಉತ್ತಪ್ರದೇಶಗಳಲ್ಲಿ ಮುದ್ರಾಂಕ ಶುಲ್ಕ ಕರ್ನಾಟಕಕ್ಕಿಂತ ಹೆಚ್ಚಿನ ಪ್ರಮಾಣವಿದೆ. ಇದನ್ನೆ ನೆಪ ಮಾಡಿಕೊಂಡು ರಾಜ್ಯ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸಂಗ್ರಹಿಸಲು ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡುತ್ತಿದೆ.
ರಾಜ್ಯ ಸರ್ಕಾರಕ್ಕೆ ನಾಲ್ಕೈದು ಸಾವಿರ ಕೋಟಿ ರೂ. ಆದಾಯ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಮಾರ್ಗಸೂಚಿ ದರ ಪರಿಷ್ಕರಣೆ ನಡುವೆ ಮುದ್ರಾಂಕ ಶುಲ್ಕವನ್ನು ಸಹ ಹೆಚ್ಚಳ ಮಾಡಿದರ ಪರಿಣಾಮ ಹೊಸದಾಗಿ ಸೈಟ್, ಮನೆ, ಕಟ್ಟಡ, ಭೂಮಿ ಸೇರಿದಂತೆ ಸ್ಥಿರಾಸ್ತಿ ಖರೀದಿ, ಕರಾರು ಪತ್ರ ನೋಂದಣಿ ಮಾಡಿಕೊಳ್ಳುವರ ಮೇಲೆ ಹೆಚ್ಚಿನ ಹೊರೆಯಾಗಲಿದೆ.
ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ತಕ್ಕಮಟ್ಟಿಗೆ ಪರಿಣಾಮ ಬೀರಲಿದೆ. ಈಗಾಗಲೇ ಸೈಟ್, ವಿಲ್ಲಾ, ಮನೆ, ಭೂಮಿ ಖರೀದಿಗೆ ಪ್ಲ್ಯಾನ್ ಮಾಡಿದವರು ಅಥವಾ ಒಪ್ಪಂದ ಮಾಡಿಕೊಂಡಿರುವರು ಡಿಸೆಂಬರ್ ಒಳಗೆ ಕ್ರಯ ಪತ್ರ ನೋಂದಣಿ ಪ್ರಕ್ರಿಯೆ ಮುಗಿಸಿಕೊಳ್ಳುವುದು ಉಳಿತಾಯಕ್ಕೆ ದಾರಿಯಾಗಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರ ಅಭಿಪ್ರಾಯವಾಗಿದೆ.