

ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಫ್ಯಾಸಿಸ್ಟ್ ಆಡಳಿತವನ್ನು ಕಿತ್ತೊಗೆಯಲು ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟ ಬೆನ್ನಲ್ಲೇ ಬಿಜೆಪಿ ದೇಶದ ಹೆಸರನ್ನು ಬದಲಾಯಿಸಲು ಹೊರಟಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು ದೇಶವನ್ನು ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಕೊನೆಗೆ ಬದಲಾಯಿಸಿದ್ದು ಹೆಸರು ಮಾತ್ರ ಎಂದು ಟೀಕಿಸಿದ್ದಾರೆ.
ಬಿಜೆಪಿಯೇತರ ಪಕ್ಷಗಳು ಫ್ಯಾಸಿಸ್ಟ್ ಆಡಳಿತವನ್ನು ಕಿತ್ತೊಗೆಯಲು ಒಗ್ಗೂಡಿ ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟ ಬೆನ್ನಲ್ಲೇ ಬಿಜೆಪಿ ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸಲು ಬಯಸಿದೆ. ಬಿಜೆಪಿ I.N.D.I.A ಎಂಬ ಒಂದೇ ಒಂದು ಪದದಿಂದ ಗಲಿಬಿಲಿಗೊಂಡಂತೆ ಕಾಣುತ್ತಿದೆ.
ಬಿಜೆಪಿ ನಾಯಕರು ವಿಪಕ್ಷಗಳ ಒಗ್ಗಟ್ಟನ್ನು ನೋಡಿ ಭಯಬಿದ್ದಂತೆ ಕಾಣುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ದೇಶವನ್ನು ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಕೊನೆಗೆ ಬದಲಾಯಿಸಿದ್ದು ಹೆಸರು ಮಾತ್ರ. ಮುಂಬರುಚ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.