

ಬೆಂಗಳೂರು: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು(ಸೋಮವಾರ) ಮಧ್ಯಾಹ್ನ 3.30ರ ವೇಳೆಗೆ ಹೊರಬೀಳಲಿದ್ದು, ಫಲಿತಾಂಶ ಏನೇ ಬಂದರೂ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಸಿಟಿವ್ ಆಗಿ ಇರಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಕರೊನಾ ಸಂಕಷ್ಟ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ಪಾಲಕರಿಗೆ ತಿಳಿದಿರಲಿ. ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ ಎಂದು ಸಚಿವರು ಸಲಹೆ ನೀಡಿದ್ದಾರೆ.
ಮಕ್ಕಳು ಯಾವ ಕೋರ್ಸ್ ಆಯ್ಕೆ ಮಾಡುತ್ತಾರೋ ಅದಕ್ಕೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ. ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಮಗು ಮನೆಯ ಬೆಳಕು. ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಸಚಿವ ಸುರೇಶ್ಕುಮಾರ್ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
ಕರೊನಾ ಆತಂಕದ ನಡುವೆಯೂ ಈ ಬಾರಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು.