

ಎರಡೇ ಪರೀಕ್ಷೆ: ಜು.2ರಂದು ಪ್ರಥಮ ಭಾಷೆ, ಜು.3ರಂದು ತೃತೀಯ ಭಾಷೆ ಪರೀಕ್ಷೆ ಇದೆ. ಜು.4ರಂದು ಜಿಟಿಎಸ್ ಅಭ್ಯರ್ಥಿಗಳಿಗೆ ಮಾತ್ರ ಮೌಖಿಕ ಮತ್ತು ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಐದನೇ ದಿನವಾದ ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಅಚ್ಚುಕಟ್ಟಾಗಿ ನಡೆದಿದ್ದು, ಶೇ.97.96 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯು ಡಿಬಾರ್ ಆದ ಪ್ರಕರಣ ವರದಿಯಾಗಿಲ್ಲ. ಸಮಾಜ ವಿಜ್ಞಾನದ ವಿಷಯಕ್ಕೆ 7,84,287 ವಿದ್ಯಾರ್ಥಿಗಳು ನೋಂದಾಂಯಿಸಿಕೊಂಡಿದ್ದು, ಈ ಪೈಕಿ 7,68,341 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 15,946 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾತನಾಡಿ, ರಾಮನಗರ ಜಿಲ್ಲೆಯ ಕನಕಪುರ ಸುತ್ತಮತ್ತಲ ಪ್ರದೇಶದಲ್ಲಿರುವ 13 ಶಾಲೆಗಳಿಗೆ ಭೇಟಿ ನೀಡಿದ್ದೆ. ಎಲ್ಲ ಕಡೆ ಉತ್ತಮವಾಗಿ ಪರೀಕ್ಷೆ ನಡೆಯತ್ತಿತ್ತು. ಎಲ್ಲ ಮುಂಜಾಗ್ರತೆ ಪಾಲಿಸುತ್ತಿರುವ ಈ ಮಕ್ಕಳು ಇತರರಿಗೆ ಮಾದರಿ ಎಂದು ಪ್ರಶಂಸಿಸಿದರು. ಅನಾರೋಗ್ಯದಿಂದಾಗಿ 613 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಸರ್ಕಾರಿ-ಖಾಸಗಿ ನಿಲಯಗಳಲ್ಲಿದ್ದ 1442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 645 ವಿದ್ಯಾರ್ಥಿಗಳ ಪೈಕಿ 52 ಮಂದಿ ಗೈರಾಗಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳ ಪೈಕಿ 12,541 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ ಎಂದರು.
ಪ್ರಮುಖ ಸಂಗತಿಗಳು ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯದ ವಿದ್ಯಾರ್ಥಿನಿ ಕಲ್ಪನಾಗೆ ಅಡುಗೆ ಮಾಡುವಾಗ ಬೆಂಕಿಯಿಂದ ಕಾಲು ಸುಟ್ಟಿದ್ದರೂ ಪರೀಕ್ಷೆಗೆ ಹಾಜರಾದಳು. ಶಿರಸಿ ಬಂಕೇಶ್ವರದ ತಾರಾ ಎಂಬ ವಿದ್ಯಾರ್ಥಿನಿ, ಕೇಂದ್ರಕ್ಕೆ ಕರೆ ತರುತ್ತಿದ್ದ ತಂದೆಗೆ ಅಪಘಾತವಾದರೂ ಪರೀಕ್ಷೆಗೆ ಹಾಜರಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿದ್ದಾರೆ. ಚಿಕ್ಕೋಡಿಯ ಘಟಪ್ರಭಾದ ಕುಲಗೋಡು ಎಂಬ ವಿದ್ಯಾರ್ಥಿ ಪರೀಕ್ಷೆಗೆ ಬರುತ್ತಿದ್ದಾಗ ರಸ್ತೆ ಅಪಘಾತವಾಗಿದ್ದು, ಬುಧವಾರದ ಪರೀಕ್ಷೆಗೆ ವಿನಾಯಿತಿ ನೀಡಲಾಗಿದೆ. ಶಿರಸಿ ಯಲ್ಲಾಪುರ ಗ್ರಾಮ ಸೀಲ್ಡೌನ್ ಆಗಿದ್ದರಿಂದ ಅಲ್ಲಿನ ಇಬ್ಬರು ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ವಾಹನದ ವ್ಯವಸ್ಥೆ ಕಲ್ಪಿಸಿದ್ದರು.
ಮಾಧ್ಯಮ ವರದಿಗಳಿಗೆ ಸ್ಪಷ್ಟನೆ: ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ನಿರ್ಬಂಧಿಸಿ ಪರೀಕ್ಷಾ ಅಕ್ರಮಗಳನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಹೀಗಾಗಿ ಮೇಲಧಿಕಾರಿಗಳು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅಕ್ರಮ ನಡೆದಿಲ್ಲ ಎಂಬುದು ಸಾಬೀತಾಗಿದೆ. ಇನ್ಮುಂದೆ ಯಾವುದೇ ಕೇಂದ್ರದ ಮುಖ್ಯಸ್ಥರು ಪ್ರತಿದಿನ ಪರೀಕ್ಷೆ ಮುಗಿದ ಬಳಿಕ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕಡ್ಡಾಯವಾಗಿ ಮೇಲಧಿಕಾರಿಗೆ ಸಲ್ಲಿಸಬೇಕು, ಅವರು ಪರಾಮಶಿಸಬೇಕೆಂದು ಸೂಚಿಸಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ತಿಳಿಸಿದರು.
ಬೆಂಗಳೂರಿನ ನಿರ್ಮಲಾ ರಾಣಿ ಶಾಲೆ ವಿದ್ಯಾರ್ಥಿನಿ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆಕೆಗೆ ಪರೀಕ್ಷೆ ವಿನಾಯಿತಿ ನೀಡಲಾಗಿದ್ದು, ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲೆ ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆಯ ದೀಪಾ ಹಿರೇಮಠ, ಗಾಯತ್ರಿ ರಾಠೋಡ ಅವರು ಸಹೋದರನ ಜತೆ ಬೈಕ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಅಪಘಾತವಾಗಿದ್ದು, ಪರೀಕ್ಷೆಯಿಂದ ವಂಚಿತರಾದರು. ಬಾಗಲಕೋಟೆ ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಜೋನ್ದಿಂದ 129 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮೂವರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.
ಯಾದಗಿರಿ ಜಿಲ್ಲೆ ಕೆಂಬಾವಿ ಪಟ್ಟಣದಲ್ಲಿ ಜೂ.27ರಂದು ನಡೆದ ಗಣಿತ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ನಾಲ್ವರು ವಿದ್ಯಾರ್ಥಿಗಳಿಗೆ ಹಳೇ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಲಾಗಿದೆ ಎಂದು ವರದಿಯಾಗಿದೆ. ನಮ್ಮಲ್ಲಿ ಹೊಸಬರು ಮತ್ತು ಪುನರಾವರ್ತಿತ ಎಂದು ವಿದ್ಯಾರ್ಥಿಗಳನ್ನು ವಿಂಗಡಿಸಲಾಗಿದೆ. ಈ ವೇಳೆ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡುವಾಗ ಹೊಸಬರಿಗೂ ಅದನ್ನೇ ನೀಡಲಾಗಿದೆ. ಆದರೆ, ಇದು ಶೇ.90 ಒಂದೇ ರೀತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮೌಲ್ಯಮಾಪನ ಮಾಡಿಸುವುದಾಗಿ ಆಯುಕ್ತರು ಭರವಸೆ ನೀಡಿದರು.
ಹಳೇ ಪ್ರಶ್ನೆಪತ್ರಿಕೆಯೂ ಮೌಲ್ಯಮಾಪನ
32 ವಿದ್ಯಾರ್ಥಿಗಳು ಪರೀಕ್ಷೆವಂಚಿತ : ಐದು ದಿನಗಳಲ್ಲಿ ಪ್ರಥಮ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ತಗುಲಿದ್ದರಿಂದ 32 ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದಾರೆ. ಅವರಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ‘ಪ್ರಥಮ ಅವಕಾಶ’ ನೀಡಿ ಪರೀಕ್ಷೆ ಬರೆಸುತ್ತೇವೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿನಿಗೆ ಪಾಸಿಟಿವ್: ಕಾರಟಗಿ(ಕೊಪ್ಪಳ)ಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬುಧವಾರ ಬಂದಿದ್ದ ವಿದ್ಯಾರ್ಥಿನಿಯ ಸ್ವಾಬ್ ಟೆಸ್ಟ್ ವರದಿ ಕರೊನಾ ಪಾಸಿಟಿವ್ ಬಂದಿದ್ದರಿಂದ ಆಕೆಯ ಪರೀಕ್ಷೆ ಬರೆಯುವುದನ್ನು ಮೊಟಕುಗೊಳಿಸಿ ರಾಯಚೂರಿನ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ. ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ತಂದೆ-ತಾಯಿ ಜತೆ ಈಕೆಯೂ ತೆರಳಿದ್ದಳು.