ಯಶ್​ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್'​ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಸ್ಟಾರ್​ ನಟ!

Untitled design (13)
Published on

ಬೆಂಗಳೂರು: 'ಕೆಜಿಎಫ್ 2' ಆದ ನಂತರವೂ ಕೂಡ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಯಾಂಡಲ್​ವುಡ್​ ಸ್ಟಾರ್​, ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್​ ಯಶ್​, ಇತ್ತೀಚಿಗೆ ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾ​ ಕುರಿತು ಅಧಿಕೃತವಾಗಿ ಘೋಷಿಸಿದರು. ತಮ್ಮ ಹೊಸ ಚಿತ್ರದ ಟೈಟಲ್ ರಿವೀಲ್ ಮಾಡುವ ಮೂಲಕ ಸಿನಿಪ್ರೇಕ್ಷಕರ ಅಗಾಧ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿರುವ ನಟ, ಯಾವ ಕಥೆಯನ್ನು ಹೇಳಲಿದ್ದಾರೆ, ಹೇಗೆ ಮೂಡಿಬರಲಿದೆ ಚಿತ್ರ ಎಂಬ ಕೌತುಕ ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಈ ಹಿಂದೆ 'ಯಶ್​ 19' ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದ 'ಟಾಕ್ಸಿಕ್' ಚಿತ್ರವನ್ನು ಮಲಯಾಳಂ ನಟಿ ಗೀತು ಮೋಹನ್​ ದಾಸ್​ ನಿರ್ದೇಶಿಸುತ್ತಿದ್ದು, ಯಶ್​ ಅವರ ಮಾನ್​ಸ್ಟರ್​ ಸಂಸ್ಥೆ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ವರದಿಗಳ ಪ್ರಕಾರ, ಈ ಚಿತ್ರಕ್ಕೆ ಯಶ್​ ಅವರೇ ನಿರ್ಮಾಪಕ ಎಂದು ಹೇಳಲಾಗಿದೆ. ಇನ್ನು ಯಶ್​ಗೆ ಮೂವರು ನಾಯಕಿಯರು ಎಂಬ ಸುದ್ದಿ ಸದ್ಯ ಪ್ರೇಕ್ಷಕರಲ್ಲಿ ಭಾರೀ ಗೊಂದಲವನ್ನು ಮೂಡಿಸಿದ್ದು, ಅಸಲಿಗೆ ಈ ಮೂವರು ನಟಿಮಣಿಯರು ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.

ಈ ಗೊಂದಲಗಳ ಬೆನ್ನಲ್ಲೇ ನಟಿಯರಾದ ಸಾಯಿಪಲ್ಲವಿ, ರಾಕುಲ್ ಪ್ರೀತ್​ ಮತ್ತು ಕರೀನಾ ಕಪೂರ್ ಹೆಸರುಗಳು ವ್ಯಾಪಕವಾಗಿ ಹರಿದಾಡಿತು. ಈ ಮೂವರು ಟಾಕ್ಸಿಕ್ ಚಿತ್ರಕ್ಕೆ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಇದೀಗ ಮತ್ತೊಂದು ಸುದ್ದಿಯೊಂದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದು, ಯಶ್​ ಚಿತ್ರದಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿ ವರದಿ ತಿಳಿಸಿದೆ.

ಈ ಬಗ್ಗೆ ಬಾಲಿವುಡ್​ನ​ ದಿಗ್ಗಜ ಏನು ಹೇಳಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net