

ಮಂಡ್ಯ: ಬದಲಾದ ಜೀವನ ಶೈಲಿಯಿಂದಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್), ಪೊಲೀಸ್ ಇಲಾಖೆ ಹಾಗೂ ಎಸ್.ಡಿ ಜಯರಾಂ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಚಾಲನೆ ನೀಡಿ ಮಾತನಾಡಿದರು.
ರೈತಾಪಿ ಜನರು ಹೆಚ್ಚಾಗಿರುವ ಮಂಡ್ಯ ಜಿಲ್ಲೆಯಲ್ಲಿಯೂ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಬಳಕೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಬದಲಾದ ಜೀವನ ಶೈಲಿ ಸೇರಿದಂತೆ ಹಲವು ಕಾರಣಗಳಿಂದ ಜನರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಈ ರೋಗಕ್ಕೆ ದುಬಾರಿ ಚಿಕಿತ್ಸೆಯನ್ನು ಪಡೆಯುವ ವೇಳೆಗೆ ತಮ್ಮ ಆಸ್ತಿಯನ್ನು ಮಾರಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಂಡು ಆರೋಗ್ಯಯುತ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಜನರಿಗೆ ಉತ್ತಮವಾದ ಆರೋಗ್ಯದ ಬಗ್ಗೆ ಜಾಗೃತಿ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ನಿರಂತರ ಕಾರ್ಯಕ್ರಮ, ಉಪನ್ಯಾಸ ಕಾರ್ಯಾಗಾರ, ತರಬೇತಿ ಶಿಬಿರ, ಐಇಸಿ ಮೇಳ, ಮೊಬೈಲ್ ತಪಾಸಣಾ ಶಿಬಿರ, ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇದಾದ ಬಳಿಕ ಡಿಎಚ್‌ಒ ಕಚೇರಿಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಸುಭಾಷ್‌ಬಾಬು, ಡಾ.ವೆಂಕಟೇಶ್, ಡಾ.ನಾಗೇಂದ್ರ ಉಪನ್ಯಾಸ ನೀಡಿದರು. ಐಎಂಎ ಅಧ್ಯಕ್ಷ ಡಾ.ಮರೀಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಡಾ.ಸೋಮಶೇಖರ್, ಡಾ.ಎನ್.ಕಾಂತರಾಜು, ಡಾ.ಜವರೇಗೌಡ, ಡಾ.ವೇಣುಗೋಪಾಲ್ ಇತರರಿದ್ದರು.
ಡಿಸಿ ಕಚೇರಿಯಿಂದ ಹೊರಟ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿ ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ಡಿಎಚ್‌ಒ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು. ಎಸ್.ಡಿ ಜಯರಾಂ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.