ನವರಾತ್ರಿ ಉತ್ಸವಕ್ಕೆ ಸಹಕರಿಸಿ

srigeri mutt
ಶೃಂಗೇರಿಯಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಅಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಡಿ.ಸಿ.ಶಂಕರಪ್ಪ, ಶ್ರೀಕರ, ಪ್ರದೀಪ್ ಕೂಳಗದ್ದೆ , ಹರೀಶ್ ವಿ.ಶೆಟ್ಟಿ , ಪ್ರವೀಣ್ ಪೂಜಾರಿ ಇತರರಿದ್ದರು.
Published on

ಶೃಂಗೇರಿ: ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ಅ.15ರಿಂದ 25ರವರೆಗೆ ನವರಾತ್ರಿ ಉತ್ಸವ ನೆರವೇರಲಿದೆ. ತಾಲೂಕಿನ ಭಕ್ತರು ಸಹಕಾರ ನೀಡಬೇಕು ಎಂದು ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಮನವಿ ಮಾಡಿದರು.
ಶುಕ್ರವಾರ ಪ್ರವಚನ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು ಅವರಿಗೆ ವಸತಿ ಹಾಗೂ ಭೋಜನ ಸುವ್ಯವಸ್ಥೆಗಾಗಿ ಮಠದ ಸಿಬ್ಬಂದಿ ಸಹಕರಿಸಲಿದ್ದಾರೆ. ಒಂಬತ್ತು ಗ್ರಾಪಂಗಳ ಬೀದಿ ಉತ್ಸವದ ಹೊಣೆಗಾರಿಕೆ ಆಯಾಯ ಗ್ರಾಪಂ ವಹಿಸಿಕೊಳ್ಳಬೇಕು ಎಂದರು.
ಉತ್ಸವದ ಸಲುವಾಗಿ ಪಟ್ಟಣವನ್ನು ತಳಿರುತೋರಣಗಳಿಂದ ಶೃಂಗರಿಸುವ ಹಾಗೂ ಸ್ವಚ್ಛತೆಯ ಜವಾಬ್ದಾರಿಯನ್ನು ಪಪಂ ಮಾಡಲಿದೆ. ಬೀದಿ ಉತ್ಸವದಲ್ಲಿ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗನ್ಮಾತೆ ಹಾಗೂ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರವಾಗಬೇಕು ಎಂದು ಹೇಳಿದರು.
ಬೀದಿ ಉತ್ಸವದಲ್ಲಿ ಯಾವ ಗ್ರಾಪಂ ಯಾವ ದಿನಾಂಕದಂದು ಪಾಲ್ಗೊಳ್ಳಬೇಕು ಎಂಬ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಠದ ಅಧಿಕಾರಿ ಶ್ರೀಪಾದ್, ಪಪಂ ಮಾಜಿ ಅಧ್ಯಕ್ಷ ಹರೀಶ್ ವಿ.ಶೆಟ್ಟಿ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ, ಧರೇಕೊಪ್ಪ ಗ್ರಾಪಂ ಉಪಾಧ್ಯಕ್ಷ ಭಾನುಪ್ರಕಾಶ್, ಬೇಗಾರು ಗ್ರಾಪಂ ಉಪಾಧ್ಯಕ್ಷ ಲಕ್ಷ್ಮೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net