

ಬೆಂಗಳೂರು: ಶ್ರೀಕೃಷ್ಣಜನ್ಮಾಷ್ಠಮಿ ಪ್ರಯುಕ್ತ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ರಸ್ತೆ ಮಾರ್ಗ ತಾತ್ಕಾಲಿಕವಾಗಿ ಮಾರ್ಪಾಡು ಮಾಡಿದ್ದಾರೆ.
ಬುಧವಾರ ಮತ್ತು ಗುರುವಾರ ಡಾ.ರಾಜ್‌ಕುಮಾರ್ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಯಶವಂತಪುರ ಕಡೆಯಿಂದ ಓರಾಯನ್ ಮಾಲ್-ಡಾ.ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾರಪ್ಪನಪಾಳ್ಯದಿಂದ ಯಶವಂತಪುರ ಪ್ಲೈಓವರ್ ಮಾರ್ಗವಾಗಿ ಬಿಎಚ್‌ಇಎಲ್ ಅಂಡರ್ ಪಾಸ್ ಮೂಲಕ ಸರ್ಕಲ್ ಮಾರಮ್ಮ ಬಳಿ ಬಲ ತಿರುವು ಪಡೆದು ಮಾರ್ಗೋಸ ರಸ್ತೆ ಮಲ್ಲೇಶ್ವರ ಮಾರ್ಗವಾಗಿ ಕೆ.ಸಿ. ಜನರಲ್ ಆಸ್ಪತ್ರೆ ಜಂಕ್ಷನ್ ತಲುಪಬೇಕು. ಅಲ್ಲಿ ಎಡ ತಿರುವು ಪಡೆದು ಮಲ್ಲೇಶ್ವರ ಬ್ರಿಡ್ಜ್ ಅಂಡರ್ ಪಾಸ್ ಮೂಲಕ ಲಿಂಕ್ ರಸ್ತೆಯಲ್ಲಿ ಸಂಚರಿಸಿ ಶೇಷಾದ್ರಿಪುರ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣ ತಲುಪಬಹುದು.
ಯಶವಂತಪುರ ಕಡೆಯಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ-ಇಸ್ಕಾನ್ ದೇವಸ್ಥಾನ-ಮಹಾಲಕ್ಷ್ಮಿ ಲೇಔಟ್ ಮಾರ್ಗವಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮಾಗಡಿ ರಸ್ತೆ, ವಿಜಯನಗರ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್‌ಗಳು ಮತ್ತು ವಾಹನಗಳು ಯಶವಂತಪುರ ಕಡೆಯಿಂದ ಜಿಎಸ್‌ಎ್ ಸರ್ಕಲ್, ಓರಾಯನ್ ಮಾಲ್ ಮುಂಭಾಗ ಸಾಗಬೇಕು. ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಾಗಿ 10ನೇ ಕ್ರಾಸ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಡಯಕಾನ್ ಜಂಕ್ಷನ್ ಮಾರ್ಗವಾಗಿ ರಾಜಾಜಿನಗರ 1ನೇ ಬ್ಲಾಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸಿ ಮಾಗಡಿ ರಸ್ತೆ ವಿಜಯನಗರ ಕಡೆಗೆ ಸಂಚರಿಸಬಹುದು ಎಂದು ಸಂಚಾರ ವಿಭಾಗ ಪೊಲೀಸರು ಸಲಹೆ ನೀಡಿದ್ದಾರೆ.