

ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿಯಿಂದ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ನ.29ರಂದು ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಪಾವಂಜೆ ಮೇಳದ ಶ್ರೀಹರಿ ಲೀಲಾಮೃತ ಯಕ್ಷಗಾನ ಹಲವು ವಿಶೇಷಗಳಿಂದ ಕೂಡಿದೆ. ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದರು ಮತ್ತು ಆಗುಂಬೆ ಸಮೀಪದ ಕಾಳಿಂಗ ಮನೆಯ ಉರಗತಜ್ಞ ಗೌರೀಶಂಕರ್ ಅವರನ್ನು ಗೌರವಿಸಲಾಗುವುದು ಎಂದು ಬೆಟ್ಟಮಕ್ಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜದಲ್ಲಿ ಮಾನವೀಯ ಸಂಬಂಧಗಳು ಸಂಕೀರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಿ ಸಾಮರಸ್ಯ ಮೂಡಿಸಲು ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಪರಿಹಾರ ಮಾರ್ಗವಾಗಿವೆ. ರಂಗಭೂಮಿ ಕಲೆಯಲ್ಲಿ ಯಕ್ಷಗಾನ ಅತ್ಯಂತ ಶ್ರೇಷ್ಠ ಕಲೆ. ನಮ್ಮ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಮಾಧ್ಯಮ. ಯಕ್ಷಗಾನ ಕಲೆಗೆ ತವರಿನಂತಿರುವ ತೀರ್ಥಹಳ್ಳಿಯಲ್ಲಿ ಯುವ ಪೀಳಿಗೆಯವರಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಆಶಯ ಹೊಂದಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಾಂಸ್ಕೃತಿಕ ಸಮಿತಿಯಿಂದ ನಿರಂತರವಾಗಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ನಡೆಸಿಕೊಂಡು ಬಂದಿದ್ದೇವೆ. ನಮ್ಮ ತಾಲೂಕಿನ ಸಾಂಸ್ಕೃತಿಕ ಪರಂಪರೆಯನ್ನು ಹೊರ ಜಗತ್ತಿಗೆ ತೋರಿಸುವ ಹೊಣೆಗಾರಿಕೆ ಇದೆ. ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣದ ಕಲ್ಪನೆಯೊಂದಿಗೆ ಪಕ್ಷಭೇದವಿಲ್ಲದೆ ಸಾರ್ಥಕ 22 ಸಂವತ್ಸರಗಳನ್ನು ಪೂರೈಸಿರುವ ಟ್ರಸ್ಟ್ 1.60 ಲಕ್ಷ ಮಂದಿ ಸದಸ್ಯರನ್ನು ಹೊಂದಿದೆ. ಮಹಿಳಾ ಸಬಲೀಕರಣದ ಸಲುವಾಗಿ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಪ್ರಮುಖರಾದ ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ಹಾರೋಗುಳಿಗೆ ಪದ್ಮನಾಭ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಬಿ.ಎಸ್.ಎಲ್ಲಪ್ಪ, ಟಿ.ಎಲ್.ಸುಂದರೇಶ್, ಜೀನಾ ವಿಕ್ಟರ್, ರತ್ನಾಕರ ಶೆಟ್ಟಿ, ಬಿ.ಆರ್.ರಾಘವೇಂದ್ರ ಶೆಟ್ಟಿ, ಶಬನಂ, ವಿಲಿಯಂ ಮಾರ್ಟಿಸ್, ಕಟ್ಟೆಹಕ್ಕಲು ಕಿರಣ್ ಇದ್ದರು.