

ಶ್ರೀ ಶ್ರೀಧರ ಸ್ವಾಮಿಗಳು ಕಳೆದ ಶತಮಾನದಲ್ಲಿ ಅವತರಿಸಿದ ಮಹಾನ್ ಸಂತರಲ್ಲಿ ಒಬ್ಬರು. ದತ್ತ ಜಯಂತಿಯಂದೇ ಅವರ ಜನನವಾಯಿತು. ದೇಶದ ವಿವಿಧೆಡೆ ವ್ಯಾಪಕವಾಗಿ ಸಂಚಾರಗೈದ ಅವರು, ಮಾನವ ಮಾಧವನಾಗಬಲ್ಲ ಹಾದಿಯನ್ನು ದರ್ಶಿಸಿದ್ದಾರೆ. ಅವರ ಸಂದೇಶ, ಬೋಧನೆಗಳು ಸರ್ವಕಾಲಕ್ಕೂ ಅನುಸರಣಯೋಗ್ಯ. ಅನೇಕ ಕೃತಿಗಳನ್ನು ಸಹ ರಚಿಸಿದ್ದಾರೆ. ಅವರ ಬೋಧಪ್ರದ ವಾಗ್ವಿಲಾಸದ ಕೆಲವು ಹೊಳಹುಗಳ ಸಂಗ್ರಹ ಇಲ್ಲಿವೆ.
ಅಜ್ಞಾನದ ನಾಶವೇ ಜ್ಞಾನ ಶಾಸ್ತ್ರ; ಆದ್ದರಿಂದ ಶಿವ, ವಿಷ್ಣು, ಗಣಪತಿ, ಅಂಬಿಕೆ ಇತ್ಯಾದಿ ಯಾವುದೇ ಹೆಸರಿನಿಂದಲಾದರೂ ಉಪಾಸಿಸಿ; ಅಂತೂ ಈ ಚರಾಚರ ವಿಶ್ವದ ರೂಪವಾಗಿ ಯಾವುದು ಸತ್ಯಸ್ವರೂಪದಿಂದ ನಮ್ಮ ಆನಂದಘನ ಸ್ವರೂಪವಿದೆಯೋ, ಅಂತಹ ಗುರುವಿನ ಸಾಕ್ಷಾತ್ಕಾರವು ನಮಗೆಲ್ಲಾ ಆಗಿ ಆ ಆನಂದ ಸ್ವರೂಪದಿಂದ ಬಾಳೋಣ. ಇದೇ ಜೀವನ್ಮುಕ್ತಿ: ಇದೇ ಜೀವಿತದ ಗುರಿ, ನೀವೆಲ್ಲರೂ ಇಂತಹ ಗುರಿಯನ್ನು ಸಾಧಿಸಿ ಜೀವನದಲ್ಲಿ ಸಫಲರಾಗಿರಿ.
***
ಶ್ರೀರಾಮನು ತನ್ನ ಚರಿತ್ರೆಯಿಂದ ಧರ್ಮಮಾರ್ಗದ, ನಾಮಸ್ಮರಣೆಯಿಂದ ಜ್ಞಾನಮಾರ್ಗದ, ಧ್ಯಾನದಿಂದ ವೈರಾಗ್ಯ ಮಾರ್ಗದ ಮತ್ತು ಪೂಜೆಯಿಂದ ಐಶ್ವರ್ಯ ಪ್ರಾಪ್ತಿ ಮಾಡಿಕೊಡುತ್ತಾನೆ. ನಿಸ್ಪೃರಿಗೆ ಎಲ್ಲಕ್ಕಿಂತ ಮಿಗಿಲಾಗಿ ಜ್ಞಾನ, ವೈರಾಗ್ಯ ಮತ್ತು ಮೋಕ್ಷ ದೊರೆತರೆ ಸಾಕು; ಇನ್ನುಳಿದದ್ದೇನನ್ನೂ ಬೇಡೆವೆನ್ನುವುದು ತಿಳಿದದ್ದೇ ಇದೆ. ಶ್ರೀರಾಮನ ಉಪಾಸನೆಯ ಮಹತ್ವವನ್ನು ಶ್ರೀ ಸಮರ್ಥರು ತಮ್ಮ ಶ್ಲೋಕಗಳಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದ್ದರಿಂದಲೇ ರಾಮದಾಸ್ಯವು ಶ್ಲಾಘನೀಯ. ರಾಮನಾಮ ಸ್ಮರಣೆ ಶ್ರೇಷ್ಠವಾದ ಮಂತ್ರ.
***
ಶುದ್ಧ ಸ್ವರೂಪದ ಸತ್ಯಸ್ಥಿತಿಯನ್ನು ಮನಸ್ಸಿನಲ್ಲಿಟ್ಟು ವಿಶ್ವಹಿತದ ಉಚ್ಚ ದೃಷ್ಟಿಯನ್ನುಳಿಸಿ ಸಮಯೋಚಿತ ಕಾರ್ಯಗಳನ್ನು ಲೋಕಕ್ಕೆ ಅನುಕರಣೀಯವಾಗುವಂತೆ, ಪುರುಷಪ್ರಯತ್ನದ ಪರಾಕಾಷ್ಠೆಯ ಉಚ್ಚ ಆದರ್ಶವಾಗುವಂತೆ ಮಾಡುತ್ತಾ ಹೋಗಿ, ತನ್ನ ಪರಿಶುದ್ಧ ಕೀರ್ತಿಯನ್ನು ಕೈ ಕಂಬದಂತೆ ಜಗತ್ತಿನಲ್ಲಿಡುವುದು ಮೊದಲಿನಿಂದಲೂ ಬಂದ ನಮ್ಮ ಜ್ಞಾನಿಗಳ ಶಿಷ್ಟಾಚಾರವು. ಸುಜ್ಞಾನದಿಂದಲೇ ಲೋಕಹಿತವು. ನೀವು ಅಂತಹ ಸುಜ್ಞಾನವನ್ನು ಪಡೆದು ಲೋಕಹಿತವನ್ನು ಸಾಧಿಸಿರಿ.
***
ಕ್ಷೀರಾನ್ನವನ್ನು ಉಂಡವನು ತಾನು ಬಯಸದೇ ಇದ್ದರೂ ಅವನ ಕ್ಷುಧಾತೃಷೆಗಳು ಹೇಗೆ ದೂರವಾಗಿ ಜೊತೆಗೆ ಪುಷ್ಟಿತುಷ್ಟಿಗಳು ತನ್ನಿಂದ ತಾನೇ ಉಂಟಾಗುವುವೋ, ಹಾಗೆಯೇ ಗುರುಭಕ್ತಿ, ಗುರುಸೇವೆ ಮಾಡಿದವನಿಗೆ ಅವನು ಬಯಸದೇ ಇದ್ದರೂ ಅವನ ದುಃಖ, ದಾರಿದ್ರ್ಯಗಳು ದೂರವಾಗಿ ಸುಖ ಸಮಾಧಾನಗಳು ಉಂಟಾಗುವುವು.
***
ಪರಮಾತ್ಮನು ಸಕಲ ಪ್ರಾಣಿಗಳಲ್ಲಿಯೂ ಇದ್ದಾನೆ. ಪರರು ಸಂತೋಷಪಟ್ಟರೆ ಅವರಲ್ಲಿರುವ ಪರಮಾತ್ಮನ ಅಂಶಕ್ಕೆ ಸಂತೋಷವುಂಟಾಗುವುದು. ಆಗ ಇವನಿಗೂ ಸದಾನಂದದ ಪ್ರಾಪ್ತಿಯಾಗುವುದು. ಆದ್ದರಿಂದ ಸದಾ ಎಲ್ಲರನ್ನೂ ಸಂತೋಷಪಡಿಸಲು ಪ್ರಯತ್ನಿಸುತ್ತಿರಬೇಕು.
***
ಮನುಷ್ಯನು ಅನುಕರಣಪ್ರಿಯನಾಗಿರುವನು. ಆದ್ದರಿಂದ ತಮ್ಮ ಅನುಕರಣೀಯವಾದ ಆದರ್ಶವನ್ನು ಜನರ ಮುಂದಿಟ್ಟು ತಾವೂ, ಮಿಕ್ಕವರೂ ಸಹ ಒಳ್ಳೆಯವರಾಗಿ ದೇಶ, ಧರ್ಮಗಳ ಸೇವೆಯನ್ನು ಎಲ್ಲರೂ ಕೂಡಾ ಮಾಡಬೇಕು. ನೀವು ಒಳ್ಳೆಯವರಾದರೆ ಜಗತ್ತೇ ಒಳ್ಳೆಯದಾಗುವುದೆಂಬುದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯವರಾಗಿರಿ.
***
ಸದ್ಭಕ್ತರುಗಳಿರಾ, ಒಳ್ಳೆಯದನ್ನು ಮಾಡುವುದಕ್ಕೆ ತಪೋಬಲ ಬೇಕು, ಸಾಮರ್ಥ್ಯ ಬೇಕು, ಶಾಸ್ತ್ರಾಧ್ಯಯನ ಬೇಕು, ತಿಳಿವಳಿಕೆ ಬೇಕು, ಸದಾಚಾರ ಬೇಕು, ಸತ್ಸಂಗತಿ ಬೇಕು, ಒಟ್ಟೂ ಎಷ್ಟು ಒಳ್ಳೆಯದಿದೆಯೋ ಅಷ್ಟೂ ಮೈಗೂಡಿದರೆ ಅವನಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದು ಬೇರೆ ಬೇರೆ, ಕೆಟ್ಟದ್ದರಿಂದ ಎಲ್ಲವೂ ಕೆಟ್ಟದ್ದೇ ಆದರೆ ಒಳ್ಳೆಯದರಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಹಾಗಾದರೆ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ಎಂದು ವಿಚಾರ ಮಾಡಿದರೆ ಗೊತ್ತಾಗುತ್ತದೆ. ಯಾವುದು ಸ್ವ-ಪರ ಹಿತವನ್ನುಂಟು ಮಾಡುತ್ತದೆಯೋ, ಸ್ವ-ಪರ ಮೋಕ್ಷಕ್ಕೆ ಕಾರಣವಾಗುತ್ತಿದೆಯೋ, ಯಾವುದಕ್ಕೆ ಧರ್ವಚರಣೆ ಎಂದು ಹೇಳುತ್ತಾರೋ ಅದು ಒಳ್ಳೆಯದು, ಪರಮಾತ್ಮನ ಕೃಪೆಯಿಂದ ನೀವೆಲ್ಲರೂ ಧರ್ವಚರಣೆಯಲ್ಲಿ ಆಸಕ್ತರಾಗಿ ಒಳ್ಳೆಯವರಾಗಿ ಬಾಳಿ.
***
ಇಂದಿನ ಮಾನವನಿಗೆ ಅರ್ಥವು ಬೇಕು; ಕಾಮವೂ ಬೇಕು. ಆದರೆ, ಅರ್ಥಕಾಮಾದಿಗಳಿಗೆ ಧರ್ಮವು ಮೂಲಾಧಾರವಾಗಿರಬೇಕು. ಧರ್ಮಕ್ಕೆ ವಿರುದ್ಧವಾಗಿ ನಡೆದು ಅರ್ಥಸಂಪಾದನೆ ಮಾಡಿದರೆ, ಕಾಮಪ್ರವೃತ್ತರಾದರೆ, ಇಹವು ಕೆಡುವುದು, ಪರವು ನಾಶವಾಗುವುದು; ಅರ್ಥವು ಅನರ್ಥಕ್ಕೆ ಕಾರಣವಾಗುವುದು.ಇದನ್ನರಿತು ಧರ್ಮದ ದಾರಿಯಲ್ಲಿ ನಡೆಯಿರಿ.
***
ಒಳ್ಳೆಯ ಸಸಿಗಳನ್ನು ಬೆಳೆಸಲು ಮೊದಲು ಬೇಲಿ ಬೇಕಾಗುವಂತೆ, ಆತ್ಮನಿಷ್ಠೆಯನ್ನು ಬೆಳೆಸಲು ಕಾಮಾದಿ ವಿಕಾರಗಳ ಹಿಂಡು ನುಗ್ಗದಂತೆ ಮೊದಲು ಕಾಯಿಕ, ವಾಚಿಕ, ಮಾನಸಿಕ ತಪಸ್ಸುಗಳು ಅವಶ್ಯವಾಗಿ ಬೇಕಾಗುತ್ತವೆ. ಅಡ್ಡ ಒಡೆಯುವ ಟೊಂಗೆಗಳನ್ನು ಮುರಿದು ಹಾಕಿ ಅಗ್ರವನ್ನು ಬೆಳೆಸುವಂತೆ, ಶ್ರವಣದಿಂದ ತಿಳಿದಿರುವ ಆತ್ಮನಿಷ್ಠೆಯನ್ನು ಬೆಳೆಸಬೇಕಾದರೆ, ಏಳುವ ಬೇರೆ ವೃತ್ತಿಗಳನ್ನೆಲ್ಲಾ ಅಲ್ಲಗಳೆದು ಅವನ್ನು ನಷ್ಟಪಡಿಸಿ ಚಿತೆôಕಾಗ್ರವನ್ನು ಬೆಳೆಸಬೇಕಾಗುತ್ತದೆ. ಅತ್ತಿತ್ತ ಹೋಗುವ ಮನಸ್ಸಿಗೆ ತಡೆಹಾಕಿ ಜ್ಞಾನ ವೈರಾಗ್ಯದ ಮಾರ್ಗದಿಂದ ಸಮಾಧಿಯ ಸತತ ಅಭ್ಯಾಸ ಮಾಡಬೇಕಾಗುತ್ತದೆ. ಇದರಿಂದ ಮುಂದೆ ಜೀವನ್ಮುಕ್ತಿಯು ಪ್ರಾಪ್ತವಾಗುತ್ತದೆ.
***
ಬದುಕು ಭಗವಂತನ ಕೊಡುಗೆ. ಇದೊಂದು ಹೋರಾಟ ಮತ್ತು ಹೊಣೆ. ಪಾಲಿಗೆ ಬಂದದ್ದನ್ನು ಎದುರಿಸಿ ಸರಿಯಾಗಿ ನಿರ್ವಹಿಸಬೇಕು. ಮನುಷ್ಯನಿಗೆ ಜೀವನದಲ್ಲಿ ಧನ ಗಳಿಕೆ, ಆಸ್ತಿ ಸಂಪಾದನೆ, ಅಂತಸ್ತು ಗಳಿಸುವುದೇ ಮುಖ್ಯವಲ್ಲ. ಜ್ಞಾನಸಂಪತ್ತು ಮತ್ತು ಆನಂದವನ್ನು ಸಂಪಾದಿಸಬೇಕು. ಬಾಲ್ಯಾವಸ್ಥೆಯಲ್ಲಿ ಜ್ಞಾನ, ತಾರುಣ್ಯಾವಸ್ಥೆಯಲ್ಲಿ ಸಂಪತ್ತು ಮತ್ತು ವೃದ್ಧಾವಸ್ಥೆಯಲ್ಲಿ ಆನಂದ, ಶಾಂತಿಯ ಬದುಕು ಸಂಪಾದಿಸಿಕೊಂಡು ಬಾಳಿದ್ದಾದರೆ ಬಾಳೆಲ್ಲ ಬಂಗಾರ, ಬದುಕಿಗೊಂದು ಸಾರ್ಥಕತೆ ದೊರಕುತ್ತದೆ, ಅಂತಹ ಬದುಕು ನಿಮ್ಮದಾಗಲಿ.
***
ಮಾನವ ಕರ್ಮಗಳು ಅವನ ಮನಸ್ಸಿನ ಶುದ್ಧತೆ ಮತ್ತು ಅಶುದ್ಧತೆಗೆ ಕಾರಣೀಭೂತವಾಗಿರುತ್ತವೆ. ಸದಾಚಾರದಿಂದ ಮನಃಶುದ್ಧಿಯಾದರೆ, ದುಷ್ಕರ್ಮದಿಂದ ಅದು ಅಪವಿತ್ರವಾಗುತ್ತದೆ. ಈ ರೀತಿಯಲ್ಲಿ ಮನುಷ್ಯ ಒಮ್ಮೆ ಅಧರ್ಮ ಆಚರಣೆಯಲ್ಲಿ ತೊಡಗಿದನೆಂದರೆ, ಅದರಲ್ಲಿಯೇ ಸುಖವಿದೆ ಎಂದು ಭ್ರಮಿಸಿ ಅದರಲ್ಲಿ ನಿರತನಾಗುತ್ತಾನೆ. ಆದರೆ, ಮಾನವನು ಜ್ಞಾನದ ಸ್ವರೂಪವನ್ನು ಅರಿತು ಜ್ಞಾನದ ಸ್ವರೂಪವು ಆನಂದವೇ ಇದ್ದು ಅದು ಸ್ವಯಂಪ್ರಕಾಶೀ. ಈ ಆನಂದವೇ ನಮ್ಮ ಸತ್ಯಸ್ವರೂಪ ಎಂದು ತಿಳಿದುಕೊಳ್ಳಬೇಕು.
***
ಬೇರೆಯವರ ದೋಷಗಳನ್ನು ಹುಡುಕಿ ತೆಗೆಯುವುದಕ್ಕೆ ನಾವು ಎಷ್ಟು ಬುದ್ಧಿ ಖರ್ಚು ಮಾಡುವೆವೋ, ಅಷ್ಟು ಬುದ್ಧಿಯನ್ನು ನಮ್ಮ ಸ್ವಂತ ದೋಷಗಳನ್ನು ಹುಡುಕಲು ಖರ್ಚು ಮಾಡಿದರೆ, ನಾವು ದುಃಖ ದೌರ್ಬಲ್ಯ ಬಂಧನಾದಿಗಳಿಂದ ಮುಕ್ತರಾಗುವೆವು ಎಂದು ಉಪನಿಷತ್ತು ಹೇಳುತ್ತದೆ. ನಮ್ಮ ದೋಷ ನಮಗೆ ಕಾಣುವುದಿಲ್ಲ. ಆದರೆ, ಬೇರೆಯವರ ದೋಷಗಳು ತಪ್ಪದೇ ಗೋಚರವಾಗುತ್ತವೆ. ತನ್ನ ದೋಷವನ್ನು ಯಾರು ತಿಳಿಯುವನೋ ಅವನೇ ವಿವೇಕಿಯು.