

ಶೃಂಗೇರಿ: ಪ್ರಾಚೀನ ಪರಂಪರೆಯ ಕಾಲಗಣನೆಯ ಪ್ರಕಾರ ಯುಗಾದಿ ಆಸ್ತಿಕರಿಗೆ ನೂತನ ವರ್ಷದ ಆರಂಭ ಹಾಗೂ ಜೀವನದ ಹೊಸ ಅಧ್ಯಾಯ ಪ್ರಾರಂಭ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಯುಗಾದಿ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಅನುಗ್ರಹ ಭಾಷಣ ಮಾಡಿದರು.
ವರ್ಷದ ಪ್ರಾರಂಭದಿಂದ ಉತ್ತಮ ಸಂಕಲ್ಪ ಕೈಗೊಂಡರೆ ಅತ್ಯುತ್ತಮವಾಗಿ ಜೀವನ ನಡೆಸಲು ಸಾಧ್ಯ. ಸನಾತನ ಧರ್ಮದ ಪರಂಪರೆ ಮೂಲಕ ಮನುಷ್ಯ ಜನ್ಮ ಸಾರ್ಥಕ್ಯ ಮಾಡಿಕೊಳ್ಳಬೇಕು. ಪ್ರಾಣಿಗಳು ನಾಡಿಗೆ ಬಂದರೆ ಬದುಕು ರೂಪಿಸಲಾಗದು. ಮಾನವ ಕಾಡಿಗೆ ಹೋದರೆ ಜೀವನ ಸಾಗಿಸುವುದು ಕಷ್ಟಸಾಧ್ಯ. ನೀರಿನಲ್ಲಿರುವ ಮೀನಿಗೂ, ಕಾಡುಪ್ರಾಣಿಗಳಿಗೂ, ಮನುಷ್ಯನಿಗೂ ಉತ್ತಮ ಜೀವನ ನಡೆಸಲು ಭಗವಂತ ವ್ಯವಸ್ಥಿತವಾಗಿ ಹಲವು ಸೌಲಭ್ಯಗಳನ್ನು ನೀಡಿದ್ದಾನೆ ಎಂದರು.
ಜೀವನ ಸಾರ್ಥಕ್ಯಗೊಳಿಸುವ ಶಕ್ತಿ ಎಲ್ಲರಲ್ಲಿಯೂ ಇದೆ. ಆದರೆ ಈ ವಿಷಯದ ಕುರಿತು ವಿಚಾರ ಮಾಡಲು ತಿಳಿವಳಿಕೆ ಅಗತ್ಯ. ಬದುಕಿನಲ್ಲಿ ಧರ್ಮಾಚರಣೆ ಮಾಡುವುದು ಪ್ರಮುಖ. ಭಗವಂತನ ಆರಾಧನೆ ಹಾಗೂ ಪರೋಪಕಾರವೇ ಧರ್ಮಾಚರಣೆಯ ಉನ್ನತ ಮೌಲ್ಯಗಳು. ಮನುಷ್ಯ ಸಾರ್ಥಕ ಬದುಕು ನಡೆಸಲು ಸನಾತನ ಧರ್ಮ ಉತ್ತಮ ಮಾರ್ಗ ತೋರಿಸಿದೆ. ಚಿಕ್ಕ ವಯಸ್ಸಿನಿಂದ ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಶರೀರ, ಮಾತು, ಮನಸ್ಸು ಆರೋಗ್ಯವಾಗಿರಬೇಕು. ಅಸಂಬದ್ಧ ಮಾತುಗಳಿಂದ ಬೇರೆಯವರಿಗೆ ನೋವು ನೀಡುವುದು, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತುಂಬಿಸಿಕೊಂಡು ಹಲವರಿಗೆ ತೊಂದರೆ ನೀಡುವುದರಿಂದ ಬದುಕು ನಿರರ್ಥಕವಾಗುತ್ತದೆ ಎಂದರು.