

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಚಂದ್ರಯಾನ - 3ರ ಯಶಸ್ವಿನಿಂದಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಡೆಗೆ ಆಸಕ್ತಿ ಹೆಚ್ಚಾಗಿದ್ದು, ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳು ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನಗರದ ಪುರಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಉದ್ಘಾಟಿಸಿದರು. ಸಮಾರಂಭದ್ಲಲಿ ಇಸ್ರೊ ಅಧ್ಯಕ್ಷ ಎಸ್. ಸೋಮನಾಥನ್ ಅವರಿಗೆ ವೀರಭದ್ರೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಂದ್ರಯಾನದ ಯಶಸ್ಸಿನಿಂದ ವಿದ್ಯಾರ್ಥಿಗಳು ವಿಜ್ಞಾನದ ಕಡೆ ವಾಲುತ್ತಿದ್ದಾರೆ. ವಿಜ್ಞಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ವಿಜ್ಞಾನದ ಬಲದಿಂದ ಮನುಷ್ಯನ ಹುಟ್ಟು ಮತ್ತು ಸಾವು ನಿರ್ಧರಿಸುವ ಕಾಲ ಬಂದರೂ ಅಚ್ಚರಿಯಲ್ಲ. ವಿಜ್ಞಾನ ಮತ್ತು ಆಧ್ಯಾತ್ಮ ಎರಡೂ ಮುಖ್ಯ. ಆಧ್ಯಾತ್ಮ ಆತ್ಮವಿಶ್ವಾಸ ಹುಟ್ಟಿಸಿದರೆ, ವಿಜ್ಞಾನ ವೈಜ್ಞಾನಿಕ ಬದುಕನ್ನು ಕಲಿಸುತ್ತದೆ ಎಂದರು.
ಇದೇ ವೇಳೆ ವೀರಭದ್ರ ಪದದ ಅರ್ಥ ‘ವೀರತ್ವದಿಂದ ಬದುಕಿದರೆ ಬದುಕು ಯಶಸ್ಸು ಕಾಣಿಸುತ್ತದೆ’ ಎಂದು. ವೀರತ್ವ ಅಂದರೆ ಬರೆ ಶೌರ್ಯ ಸಾಹಸ ಅಷ್ಟೇ ಅಲ್ಲ. ಪರೀಕ್ಷಾ ಸಂದರ್ಭದಲ್ಲಿ ಸವಾಲನ್ನು ಎದುರಿಸುವ ಗುಣ ವೀರಭದ್ರನ ಲಕ್ಷಣ ಎಂದ ಅವರು, ಇಸ್ರೋ ಅಧ್ಯಕ್ಷರಿಗೆ ವೀರಭದ್ರೇಶ್ವರ ಪ್ರಶಸ್ತಿ ಪ್ರಧಾನ ಮಾಡಿರುವುದು ವಿಜ್ಞಾನ ಕ್ಷೇತ್ರಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ವೀರಶೈವ ಲಿಂಗಾಯತರು ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ತಾವೂ ಬೆಳೆಯೋಣ ಇತರ ಸಮಾಜದವರನ್ನು ಬೆಳೆಸೋಣ ಎನ್ನುವುದು ವೀರಶೈವ ಸಮಾಜದವರ ನೀತಿ. ಈ ಸಮಾಜವನ್ನು ಇತರ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ಆಧ್ಯಾತ್ಮ ಸಾಧಕರಾದ ವಿನಯ್ ಗುರೂಜಿ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಇತರರು ಇದ್ದರು.