

ಸೊರಬ: ತಾಲೂಕಿನ ದುಗ್ಲಿ ಗ್ರಾಮದ ಶ್ರೀ ರಂಭಾಪುರಿ ಶಾಖಾ ಮಠ ಶ್ರೀ ಗುರು ರೇವಣಸಿದ್ಧೇಶ್ವರ ಕೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಪ್ರಯುಕ್ತ ಶ್ರೀ ರೇವಣಸಿದ್ಧೇಶ್ವರ ರಥೋತ್ಸವ, ಮುರುೇಂದ್ರ ಸ್ವಾಮಿಗಳ 6ನೇ ವರ್ಷದ ಪುಣ್ಯಾರಾಧನೆ, ಮಠದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಪೂಜ್ಯರ ಗದ್ದುಗೆ, ಸಭಾಭವನ, ರಥದ ಮನೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾ.30ರಿಂದ ಏ.6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 30ರಂದು ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮೂರ್ತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳ ಗದ್ದುಗೆ ಮೇಲೆ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪಿಸಲಾಗುವುದು ಎಂದರು.
31ರಂದು ಬೆಳಗ್ಗೆ ಶ್ರೀ ರೇವಣಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ, ಕಾಳಸರ್ಪ ದೋಷ ನಿವಾರಣೆಗಾಗಿ ಸರ್ಪಶಾಂತಿ ಹೋಮ, ಸಂಜೆ ರಥೋತ್ಸವ, ಮಹಾ ಮೃತ್ಯುಂಜಯ ಯಾಗ ಶಾಲೆ ಪ್ರವೇಶ ಮತ್ತು ಶಾಂತಿ ಪೂಜೆ, ರಾತ್ರಿ 9ಕ್ಕೆ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಏ.1ರಂದು ಒಂದು ಲಕ್ಷ ಮಹಾಮೃತ್ಯುಂಜಯ ಜಪಯಜ್ಞ, ಜಾನಪದ ಜೋಗತಿ ನೃತ್ಯ ಹಾಸ್ಯ ಕಾರ್ಯಕ್ರಮ, 2ರಂದು ಮಹಾಮೃತ್ಯುಂಜಯ ಜಪಯಜ್ಞ ಮತ್ತು ಧರ್ಮ ಸಮಾರಂಭ, ರಾತ್ರಿ ಗ್ರೂಪ್ ಡಾನ್ಸ್ ಆಯೋಜಿಸಲಾಗಿದೆ. 3ರಂದು ಧರ್ಮ, ಸಂಸ್ಕೃತಿ ಕುರಿತು ಚಿಂತನ-ಮಂಥನ, ರಾತ್ರಿ ಹಾಸ್ಯ ಸಂಭ್ರಮ, 4ರಂದು ಶಿವಾದ್ವೈತ ಸಿದ್ಧಾಂತ ವಿಚಾರ ಚಿಂತನೆ, 5ರಂದು ಸಮಾಜೋಸಾಂಸ್ಕೃತಿಕ ಭಾವೈಕ್ಯ ಸಮಾರಂಭ, ರಾತ್ರಿ ಶಿವಮೊಗ್ಗ ಮತ್ತು ಕಾರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಏ.6ರಂದು ಬೆಳಗ್ಗೆ 11ಕ್ಕೆ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಮತ್ತು ಧರ್ಮ ಸಮಾರಂಭವು ಬಾಳೆಹೊನ್ನೂರು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದರು.
ಡಾ. ಎಚ್.ಇ. ಜ್ಞಾನೇಶ್, ವಿಜೇಂದ್ರ ಗೌಡ, ಗುರುಪ್ರಸನ್ನ ಗೌಡ, ಪ್ರಕಾಶ್, ಚಂದ್ರಪ್ಪ, ಜಗದೀಶ ಗೌಡ, ಗಂಗಾಧರ ಗೌಡ, ವಿಶ್ವನಾಥ ಗೌಡ, ಸಂತೀಶ್, ಚಂದ್ರಶೇಖರ ನಿಜಗುಣ, ಗಂಗಾಧರ, ನಾಗರಾಜ, ಸುರೇಂದ್ರ ಗೌಡ, ಡಿ.ಶಿವಯೋಗಿ, ಸಂದೀಪ, ವಿನಯ, ರೇಣುಕಮ್ಮ ಗೌಳಿ, ಗುರುನಾಥ ಗೌಡ ಇತರರಿದ್ದರು.