

ವಿಭೂತಿಕೆರೆ ಶಿವಲಿಂಗಯ್ಯ
ರಾಮನಗರ: ಬಾನೆತ್ತರದ ಹೆಬ್ಬಂಡೆಗಳು, ಹಚ್ಚ ಹಸಿರಿನ ಮೈಸಿರಿ ಗಿರಿ ಶಿಖರಗಳ ಸಾಲು. ಭಕ್ತರ ಶೃದ್ಧಾಭಕ್ತಿಯ ತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮೇ 23 ರ ಮಧ್ಯಾಹ್ನ 12 ಗಂಟೆಗೆ ರೇವಣಸಿದ್ದೇಶ್ವರಸ್ವಾಮಿಯ ಮಹಾರಥೋತ್ಸವ ಧಾರ್ಮಿಕ ದತ್ತಿ ಇಲಾಖೆ ಮತ್ತು ಸ್ಥಳೀಯ ಗ್ರಾಮಗಳ ಭಕ್ತರಿಂದ ಸಾರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ.
ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ ಭಕ್ತರ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುತ್ತಿದೆ. ಒಂದೊಂದು ಶಿಲೆಯು ಒಂದೊಂದು ಕಥೆ ಏಳುವ ಭಕ್ತಿಧಾಮ ಇದಾಗಿದ್ದು ಚಾರಣ ಪ್ರಿಯರ ಸ್ವರ್ಗ, ಸುಂದರ ಪ್ರಕೃತಿಯ ಮಡಿಲು ಒಮ್ಮೆ ಬಂದರೆ ಮತ್ತೆ ಮತ್ತೆ ಬರಬೇಕೆನ್ನುವ ಕ್ಷೇತ್ರ ರೇವಣಸಿದ್ದೇಶ್ವರ ಬೆಟ್ಟ ಇಂತಹ ಬೆಟ್ಟಕ್ಕೆ ಭಕ್ತರು ರೇವಣ ಬೆಟ್ಟ, ರೇಣುಕ ಬೆಟ್ಟ, ರೇವಪ್ಪನ ಬೆಟ್ಟ ಎಂಬಿತ್ಯಾದಿ ಹೆಸರಿನಿಂದ ಕರೆಯುತ್ತಾರೆ.
ಜೊತೆಗೆ ಪಾಂಡವರು ತಮ್ಮ ಅಜ್ಞಾತ ವಾಸದ ಕಾಲದಲ್ಲಿ ಬೆಟ್ಟದ ಗಿರಿ ಕಂದರಗಳಲ್ಲಿ ಬಂದು ನೆಲೆಸಿದ್ದರು ಎಂಬ ಪ್ರತೀತಿ. ಅದರ ಕುರುಹಾಗಿ ಧರ್ಮರಾಯ ಭೀಮನಿಂದ ಪ್ರತಿಷ್ಟಾಪಿಸಲ್ಪಟ್ಟ ಮರುಳಸಿದ್ದೇಶ್ವರ, ಭೀಮೇಶ್ವರ ದೇವಾಲಯಗಳನ್ನು ಕ್ಷೇತ್ರದಲ್ಲಿ ಕಾಣಬಹುದು.
ಕ್ಷೇತ್ರದ ಪ್ರಮುಖ ಸ್ಥಳಗಳು: ಬೆಟ್ಟದ ತಳ ಭಾಗದಲ್ಲಿ ರೇಣುಕಾಂಭ, ಬಸವೇಶ್ವರ, ದಾಸೋಹ ಮಠ, ದಾಸೋಹ ಮಠದ ಆವರಣದಲ್ಲಿ ಮಠದ ವತಿುಂದ ನಿರ್ಮಾಣ ಮಾಡಿರುವ ರೇವಣಸಿದ್ದೇಶ್ವರರ ಆಕರ್ಷಕ ಮೂರ್ತಿ, ಬೆಟ್ಟದ ಮಧ್ಯ ಭಾಗದಲ್ಲಿಪಾಂಡವರ ವನವಾಸ ಕಾಲದಲ್ಲಿ ಭೀಮನಿಂದ ಪ್ರತಿಷ್ಟಾಪನೆಗೊಂಡ ಮರುಳ ಸಿದ್ದೇಶ್ವರ, ಪಕ್ಕದಲ್ಲೇ ವೀರಭದ್ರಸ್ವಾಮಿ, ಅದರ ಪಕ್ಕದಲ್ಲಿ ಭೀಮೇಶ್ವರ, ಕಲ್ಯಾಣಿ, ಬೆಟ್ಟ ಏರುವಾಗ ಮಧ್ಯೆ ಗಣೇಶ ದೇವಾಲಯ, ಬೆಟ್ಟದ ಮೇಲಿರುವ ಎರಡು ಕಲ್ಯಾಣಿಗಳು, ತುತ್ತ ತುದಿಯಲ್ಲಿರುವ ದೊಡ್ಡ ಗಂಟೆ, ಬೆಟ್ಟದ ತುದಿಯಲ್ಲಿ ಎರಡು ಶಿಖರಗಳು, ಎತ್ತರದ ಏಕಶಿಲಾ ಬೆಟ್ಟ, ಬೆಟ್ಟದ ಮೇಲ್ಬಾಗದಲ್ಲಿ ರೇವಣಸಿದ್ದೇಶ್ವರ ದೇವಾಲಯ, ಪಕ್ಕದಲ್ಲಿ ಕಲ್ಯಾಣಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಬೆಟ್ಟದಲ್ಲಿವೆ.
ಮೇ.22 ರ ಬುಧವಾರ ರಾತ್ರಿ 7 ಗಂಟೆಗೆ ಗಿರಿಜಾ ಕಲ್ಯಾಣ, ಸಂಜೆ ಬಸವೇಶ್ವರಸ್ವಾಮಿಗೆ ಯಳವಾರ ಸೌದೆ, ಮೇ. 23ರ ಗುರುವಾರ ಬೆಳಿಗ್ಗೆ 6 ಗಂಟೆಗೆ ಬಸವೇಶ್ವರಸ್ವಾಮಿ ಅಗ್ನಿಕೊಂಡ, ಮಧ್ಯಾಹ್ನ 12 ಗಂಟೆಗೆ ರೇವಣಸಿದ್ದೇಶ್ವರರ ಮಹಾರಥೋತ್ಸವ, ರಾತ್ರಿ ಪಲ್ಲಕ್ಕಿ ಉತ್ಸವ, ಮೇ 24 ರ ಶುಕ್ರವಾರ ಬೆಳಿಗ್ಗೆ ಹಗಲು ಗಿರಿ ಪ್ರದಕ್ಷಿಣೆ, ರಾತ್ರಿ ಅಡ್ಡ ಪಲ್ಲಕ್ಕಿ ಉತ್ಸವ, ಮೇ. 25 ರ ಶನಿವಾರ ಬೆಳಿಗ್ಗೆ 11-50 ಗಂಟೆಗೆ ರೇಣುಕಾಂಭ ಅಮ್ಮನವರ ರಥೋತ್ಸವ ಸಂಜೆ 5 ಶಯನೋತ್ಸವ ನಡೆದು ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಮೇ. 22 ರ ಬುಧವಾರ ಸಂಜೆ 6 ಗಂಟೆಗೆ ಶ್ರೀ ಮಠದ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶೇಷವಾಗಿ ಜನಪದ ಗಾಯಕರಾದ ರಾಮನಗರ ಶಿವಕುಮಾರ್, ಶಿವಾರ ಉಮೇಶ್, ಮಾರಗೌಡನಹಳ್ಳಿ ಶಂಕರಪ್ಪ ಮತ್ತು ತಂಡದವರಿಂದ ಜನಪದ, ಭಾವಗೀತೆ, ಭಕ್ತಿಗೀತೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಜಾತ್ರಾ ಸಮಯದಲ್ಲಿ ಮತ್ತು ಪ್ರತಿದಿನ ಕ್ಷೇತ್ರಕ್ಕೆ ಬರುವ ಭಕ್ತರಿಗೆ ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ವತಿುಂದ ನಿತ್ಯ ದಾಸೋಹ ಭವನದಲ್ಲಿ ಮತ್ತು ಬೆಟ್ಟದ ದಾಸೋಹ ಮಠದಲ್ಲಿ ಮುದ್ದುಬಸವಲಿಂಗರಾಜ ಸ್ವಾಮಿಗಳು, ರಾಜಶೇಖರ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ಮಠದಲ್ಲಿ, ಅಕ್ಕಪಕ್ಕದ ಗ್ರಾಮಸ್ಥರು ನಡೆಸುವ ಅರವಂಟಿಗೆಗಳಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ.