ರಂಭಾಪುರಿ ಕ್ಷೇತ್ರದಲ್ಲಿ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಹೆಜ್ಜೆ ಗುರುತು ಸ್ಮರಿಸಿದ ರಂಭಾಪುರಿ ಜಗದ್ಗುರುಗಳು

Sri Rambhapuri Jagadguru SPBalasubrahmanyam
Published on

ಬೆಂಗಳೂರು: ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ರಂಭಾಪುರಿ ಕ್ಷೇತ್ರಕ್ಕೂ ಎಸ್​ಪಿಬಿ ಅವರಿಗೂ ಇದ್ದ ನಂಟಿನ ಬಗ್ಗೆ ಸ್ಮರಿಕೊಂಡಿದ್ದಾರೆ.

ಒಮ್ಮೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೆ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಆಗಮಿಸಿದ್ದರು. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, 'ಶ್ರೀ ವೀರಭದ್ರಸ್ವಾಮಿ ನನ್ನ ಆರಾಧ್ಯದೈವ. ವೀರಭದ್ರಸ್ವಾಮಿಯನ್ನೇ ಆರಾಧಿಸುವ ಮನೆತನ ನಮ್ಮದು. ನನ್ನ ಹೆಸರು ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ' ಎಂದು ಹೇಳಿದ್ದರು. ಶಿವಭಕ್ತರಾದ ಮತ್ತು ವೀರಶೈವ ಸಂಪ್ರದಾಯದ ಪರಂಪರೆಯಲ್ಲಿ ಹುಟ್ಟಿದ್ದ ಅವರು ಎಲ್ಲ ಸಮುದಾಯದ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಂತಹ ಒಬ್ಬ ಶ್ರೇಷ್ಠ ಗಾಯಕರನ್ನು ಈ ನಾಡು ಕಳೆದುಕೊಂಡು ತಬ್ಬಲಿಯಾಗಿದೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.

ಕನ್ನಡದಲ್ಲಿ ಅವರು ಹಾಡಿದ ಅನೇಕ ಭಕ್ತಿಗೀತೆಗಳು ಜನಮನ ಮುಟ್ಟಿದ್ದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಹಾಡಿದ ಗೀತೆಗಳೂ ಜನರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತರಿಗೆ ಬೋಧಿಸಿದಂತಹ 'ಸಿದ್ಧಾಂತ ಶಿಖಾಮಣಿ'ಯನ್ನು ರಾಗ-ಲಯಬದ್ಧವಾಗಿ ಹಾಡಿ, ಅದಕ್ಕೆ ಸರಳವಾಗಿ ಕನ್ನಡದಲ್ಲಿ ಅರ್ಥವನ್ನು ಕೂಡ ಹೇಳಿದಂತಹ ಧ್ವನಿ ಸುರಳಿಯ ಕೀರ್ತಿ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸಂದಿದೆ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಭಗವಂತ ನೀಡಲಿ ಎಂದು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು. 2006ರ ಮೇ 28ರಂದು ರಂಭಾಪುರಿ ಕ್ಷೇತ್ರಕ್ಕೆ ಖ್ಯಾತ ಗಾಯಕ ಎಸ್​ಪಿಬಿ ಅವರು ದಂಪತಿ ಸಮೇತ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net