

ನಂಜನಗೂಡು: ತಾಲೂಕಿನ ಸಂಗಮ ಸುಕ್ಷೇತ್ರದಲ್ಲಿರುವ ಪವಾಡ ಪುರುಷ ಸದ್ಗುರು ಶ್ರೀ ಮಹದೇವ ತಾತಾ ಅವರ 36ನೇ ವರ್ಷದ ಸಂಸ್ಮರಣೋತ್ಸವ ಹಾಗೂ ಪ್ರಮಥ ಗಣರಾಧನೆ ಅಂಗವಾಗಿ ಭಾನುವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ 5.30 ಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಗಳು ಗದ್ದುಗೆ ಒಳ ಆವರಣದಲ್ಲಿ ಜರುಗಿತು. ನಂತರ ಕಂತೇ ಮಹದೇಶ್ವರ ಬೆಟ್ಟ ಶಿಲಾಮಠದ ಮಹಾಂತ ಸ್ವಾಮೀಜಿ ಅವರಿಗೆ ಪಾದಪೂಜೆ ನಡೆಯಿತು. ರಾಮಲಿಂಗೇಶ್ವರ ಕ್ಷೇತ್ರದ ಕಾರ್ಯಸ್ವಾಮಿ ಮಠಾಧ್ಯಕ್ಷ ಮಹೇಶ್ವರ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಯಿತು.
ವಿವಿಧ ಬಗೆಯ ಅಲಂಕೃತ ಪುಷ್ಪ ಹಾಗೂ ವರ್ಣಮಯ ಅಲಂಕಾರಿಕ ಬಟ್ಟೆಗಳಿಂದ ಸಿಂಗರಿಸಿದ್ದ ಎರಡು ಜೋಡಿ ರಥಗಳಲ್ಲಿ ಬೆಳ್ಳಿ ಹಾಗೂ ಪಂಚಲೋಹದ ಮಹದೇವ ತಾತಾ ಅವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಾನಗಳನ್ನು ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಸುತ್ತಲಿನ ಆವರಣದಲ್ಲಿ ಜೋಡಿ ರಥಗಳು ಸಾಗಿ ಸ್ವಸ್ಥಾನಕ್ಕೆ ಮರಳಿದವು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು. ವೀರಗಾಸೆ, ನಂದಿಧ್ವಜ, ವಾದ್ಯಗೋಷ್ಠಿ, ಪೂಜಾ ಕುಣಿತ, ಶೃಂಗಾರ ಮೇಳ, ವೀರಭದ್ರ ಕುಣಿತ ರಥೋತ್ಸವದ ಮೆರಗು ಹೆಚ್ಚಿಸಿತು.
ಕಂಸಾಳೆ ಜನಪದರು ಹಾಗೂ ಭಜನೆ ತಂಡಗಳು ಮಹದೇವ ತಾತಾ ಸ್ಮರಣೆಯ ಗೀತೆಗಳನ್ನು ಪಠಿಸುತ್ತ ಹೆಜ್ಜೆ ಹಾಕಿದರು. ರಥಗಳಿಗೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಪವಾಡ ಪುರಷನ ಕೃಪೆಗೆ ಪಾತ್ರರಾದರು. ಸಂಗಮ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಸುತ್ತ್ತಲಿನ ಗ್ರಾಮಗಳ ಭಜನಾ ತಂಡಗಳಿಂದ ಹರಿ ಭಜನೆ, ಕೀರ್ತನೆಗಳ ಗಾಯನ ನಡೆಯಿತು.
ಕಪಿಲೆ, ನುಗು ಹಾಗೂ ಗುಪ್ತಗಾಮಿನಿ ಸಂಗಮಗೊಳ್ಳುವ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ಸಹಸ್ರಾರು ಭಕ್ತರು ಆಗಮಿಸಿದ್ದರಿಂದ ಕುಡಿಯುವ ನೀರು, ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಮೈಸೂರು, ನಂಜನಗೂಡು, ಹುಲ್ಲಹಳ್ಳಿ ಹಾಗೂ ಹೊಮ್ಮರಗಳ್ಳಿ ಮಾರ್ಗವಾಗಿ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಕಣ್ಮನ ಸೆಳೆದ ಅಲಂಕಾರ: ಮಹದೇವ ತಾತಾ ಗದ್ದುಗೆಯಲ್ಲಿ ಬಗೆಬಗೆಯ ಪುಷ್ಪಗಳಿಂದ ಮಾಡಲಾಗಿದ್ದ ಅಲಂಕಾರ ಕಣ್ಮನ ಸೆಳೆಯಿತು.
ಅನ್ನಸಂತರ್ಪಣೆ: ಸಂಸ್ಮರಣೋತ್ಸವದಲ್ಲಿ ಭಾಗಿಯಾಗಿದ್ದ 30 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಹದೇವ ತಾತಾ ಭಕ್ತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸೇವಾರ್ಥದಾರರು ದಾಸ್ತಾನು, ತರಕಾರಿ ಪದಾರ್ಥಗಳನ್ನು ಕೊಡುಗೆಯಾಗಿ ನೀಡಿದ್ದರು. ಮಹದೇವ ತಾತಾ ಭಕ್ತರಾಗಿರುವ ಬಾಣಸಿಗರು, ಸ್ವಯಂ ಸೇವಕರು ದಾಸೋಹದಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.