ಸಾವಿನಲ್ಲೂ ಗುಟ್ಟು ಬಿಟ್ಟು ಕೊಡದ ಶ್ರೀಲಂಕಾ ಗ್ಯಾಂಗ್​ಸ್ಟರ್; ಎರಡು ವರ್ಷಗಳಿಂದ ಭಾರತದಲ್ಲೇ ಅಡಗಿದ್ದ...!

Srilanka gangster
Published on

ಚೆನ್ನೈ: ಆತ ಶ್ರೀಲಂಕಾದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​. ಆತನ ವಿರುದ್ಧ ಹಲವು ಕೊಲೆ ಮೊಕದ್ದಮೆಗಳು, ಗ್ಯಾಂಗ್​ವಾರ್​ ನಡೆಸಿದ ಆರೋಪಗಳಿದ್ದವು. ಎರಡು ವರ್ಷಗಳಿಂದ ಭಾರತದಲ್ಲಿ ಅವಿತಿದ್ದಲ್ಲದೇ, ಸಾವಿನಲ್ಲೂ ತನ್ನ ಗುರುತು ಪತ್ತೆಯಾಗದಂತೆ ನೋಡಿಕೊಂಡಿದ್ದ.

ಆತನ ಪೂರ್ಣ ಹೆಸರು ಮದ್ದಮಗೆ ಲಸಂತಾ ಚಂದನ ಪಿರೇರಾ ಅಲಿಯಾಸ್ ಅಂಗೊದ ಲೊಕ್ಕ. ಶ್ರೀಲಂಕಾದಿಂದ ತಲೆಮರೆಸಿಕೊಂಡು ಕೊಯಮತ್ತೂರಿನಲ್ಲಿ ಎರಡು ವರ್ಷಗಳಿಂದ ನೆಲೆಸಿದ್ದ. ಜುಲೈ 3ರಂದು ಆತನನ್ನು ಅನಾರೋಗ್ಯದ ಕಾರಣದಿಂದ ಕೊಯಮತ್ತೂರು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟ ಬಳಿಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರಿಗೆ ಆತನ ಹೆಸರು ಪ್ರದೀಪ್​ ಸಿಂಗ್​ ಎಂದು ಹೇಳಿದ್ದಲ್ಲದೇ, ವಿಳಾಸಕ್ಕಾಗಿ ಆಧಾರ್​ ಕಾರ್ಡ ನೀಡಲಾಗಿತ್ತು.

ಬಳಿಕ, ಅಂಗೋದ್​ ಲೊಕ್ಕಾನನ್ನು ಆತನ ಜತೆಗಿದ್ದವರು ಜುಲೈ 4ರಂದು ಮಧುರೈಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ, ಶ್ರೀಲಂಕಾದಿಂದ ಕೊಯಮತ್ತೂರಿನ ಪೊಲೀಸರಿಗೆ ಮಾಹಿತಿ ಬಂದಾಗ ಅಚ್ಚರಿ ಕಾದಿತ್ತು. ಮೃತಪಟ್ಟವನು ಪ್ರದೀಪ್​ ಸಿಂಗ್​ ಅಲ್ಲ, ಬದಲಿಗೆ ಕುಖ್ಯಾತ ಗ್ಯಾಂಗ್​​ಸ್ಟರ್​ ಅಂಗೊದ್​ ಲೊಕ್ಕಾ ಆಗಿದ್ದ. ಆತನ ಶವ ಹೊರ ತೆಗೆದು ಗುರುತು ಪತ್ತೆ ಹಚ್ಚಲಾಯಿತು.

ನಕಲಿ ದಾಖಲೆಗಳನ್ನು ಸೃಷ್ಟಿಸಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದಲ್ಲಿ ಮಹಿಳೆ ಸೇರಿ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ಶ್ರೀಲಂಕಾ ಪ್ರಜೆಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net