

ಶೃಂಗೇರಿ: ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಯ ಎಲ್ಲ ಸಂಕಷ್ಟಗಳೂ ಪರಿಹಾರವಾಗುತ್ತವೆ. ಪರೀಕ್ಷೆ ಎಂಬ ಭಯದಿಂದಲೇ ವಿದ್ಯಾರ್ಥಿ ಲಿತಾಂಶದಲ್ಲಿ ಹಿನ್ನಡೆ ಅನುಭವಿಸುತ್ತಾನೆ. ಗುರುವಿನ ಕೃಪೆ ಇದ್ದರೆ ಭಯ ದೂರವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಆದಿಚುಂಚನಗಿರಿ ಎಜುಕೇಶನ್ ಟ್ರಸ್ಟ್ ಹಾಗೂ ಶಾಲಾ ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯವಾಗಿದೆ. ಗೆಲುವು ಮತ್ತು ಸೋಲುಗಳಲ್ಲಿ ಯಾವುದೇ ಗೊಂದಲಗಳನ್ನು ಸೃಷ್ಟಿಸಿಕೊಳ್ಳದೆ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಸಮಚಿತ್ತದಿಂದ ಮಾಡಬೇಕು. ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಎನ್.ಜಿ.ರಾಘವೇಂದ್ರ ಮಾತನಾಡಿ, ಹಲವು ಕ್ರಿಯಾತ್ಮಕ ಪ್ರಯೋಗಗಳಿಂದ ಜಿಲ್ಲೆ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಜೆಸಿಐ ರಾಷ್ಟ್ರೀಯ ತರಬೇತುದಾರ ಕಾರ್ಕಳದ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಶಿಕ್ಷಕರಿಂದ ಕೇಳಿಸಿಕೊಳ್ಳುವ ಕಲೆ ನಿರಂತರವಾಗಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಒತ್ತಡ ಬೀಳದಂತೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಕಲಿತ ವಿಷಯವನ್ನು ಪುನಃ ಮನನ ಮಾಡಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ತಾಲೂಕಿನ ಪ್ರೌಢಶಾಲೆಗಳ ಸುಮಾರು 550 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ, ಬೆಳ್ತಂಗಡಿ ಪರಿಸರ ತಜ್ಞ ದುಗ್ಗಪ್ಪಗೌಡ, ಮುಖ್ಯಶಿಕ್ಷಕ ಮಂಜುನಾಥ್ ಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಿಇಒ ಕೆ.ಸಿ.ನಾಗೇಶ್, ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಕಿರಣ್ ಕುಮಾರ್, ಅಭಿಲಾಷ್, ಸುಧಾ, ಮೈತ್ರಿ, ಭಾರತಿ, ಪೂರ್ಣೇಶ್ ಮತ್ತು ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.