ಬಾಲಿವುಡ್​ನಲ್ಲಿ 'ಕಿಸ್'​ ಬೆಡಗಿ ಹವಾ! ಮತ್ತೊಂದು ಚಿತ್ರಕ್ಕೆ ನಾಯಕಿಯಾದ ಶ್ರೀಲೀಲಾ? | Bollywood

ವಿಜಯವಾಣಿ - 2025-02-11T131137.247
Published on

ಮುಂಬೈ: ‘ಕಿಸ್’​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಯುವ ನಟಿ ಶ್ರೀಲೀಲಾ, ತದನಂತರ ಹೆಚ್ಚು ಗುರುತಿಸಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ. ಮಹೇಶ್​ ಬಾಬು ಅಭಿನಯದ ‘ಗುಂಟೂರು ಕಾರಂ’, ರಾಮ್​ ಪೋತಿನೇನಿ ನಟಿಸಿದ ‘ಸ್ಕಂದ’ ಸೇರಿದಂತೆ ಸ್ಟಾರ್​ ನಟರ ಸಿನಿಮಾಗಳಲ್ಲಿ ಕುಣಿದು ಕುಪ್ಪಳಿಸಿದ ನಟಿ, ಕೆಲವೇ ಕೆಲವು ಹಿಟ್ ನೋಡಿದ್ದೇ ವಿನಃ ಉಳಿದದ್ದೆಲಾ ಸೋಲು. ಇದೆಲ್ಲದರ ಮಧ್ಯೆಯೂ ಹಲವು ಚಿತ್ರಗಳ ಆಫರ್ ಪಡೆಯುತ್ತಿರುವ ಕಿಸ್ಸಿಕ್​ ಬೆಡಗಿಗೆ ಇದೀಗ ಮತ್ತೊಂದು ಬಾಲಿವುಡ್​ ಚಿತ್ರದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ.

ಕಳೆದ ವರ್ಷ ಬಾಲಿವುಡ್​ಗೆ ಹಾರಿದ ಶ್ರೀಲೀಲಾ, ನಟ ಸಿದ್ಧಾರ್ಥ್​​ ಮಲ್ಹೋತ್ರಾ ಜತೆ ಅಭಿನಯಿಸಲು ಒಪ್ಪಿದರು. ಈ ಮೂಲಕ ಸ್ಯಾಂಡಲ್​ವುಡ್​, ಟಾಲಿವುಡ್​ ನಂತರ ಬಾಲಿವುಡ್​ನಲ್ಲಿಯೂ ಶ್ರೀಲೀಲಾ ಹವಾ ಜೋರಾಯಿತು. ಇನ್ನು ಚಿತ್ರ ರಿಲೀಸ್ ಕಾಣುವ ಮುನ್ನವೇ ಮತ್ತೊಬ್ಬ ಸ್ಟಾರ್​ ನಟನೊಂದಿಗೆ ಅಭಿನಯಿಸಲು ಕಿಸ್ ಬೆಡಗಿ ಸಜ್ಜಾಗಿದ್ದಾರೆ ಎಂಬ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈಗಾಗಲೇ ಚಿತ್ರದಲ್ಲಿ ನಟಿಸಲು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ಸಿನಿ ಮೂಲಗಳ ಪ್ರಕಾರ, ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಬಾಲಿವುಡ್‌ನ ಹೀರೋ ಕಾರ್ತಿಕ್ ಆರ್ಯನ್ ಅವರೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದು ನಿಜವಾದರೆ, ಕನ್ನಡ ನಟಿಯ ಹವಾ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಬೀಸಲಿದೆ. ಈ ಹಿಂದೆ ತೆಲುಗು ಚಿತ್ರಗಳಲ್ಲಿ ನಟಿಸಿ, ಪ್ರೇಕ್ಷಕರಿಂದ ಸೈಎನಿಸಿಕೊಂಡಿರುವ ಶ್ರೀಲೀಲಾ, ಇದೀಗ ಬಾಲಿವುಡ್​ನಲ್ಲಿ ಸಹ ತಮ್ಮ ನಟನಾ ಕೌಶಲ್ಯಗಳನ್ನು ಪ್ರದರ್ಶಿಸಲು ಮುಂದಾಗಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net