ಕನ್ನಡ, ತೆಲುಗು ಆಯ್ತು ಈಗ ತಮಿಳು! 'ಕಿಸ್ಸಿಕ್'​ ಬ್ಯೂಟಿ ಹುಡುಕಿ ಬರುತ್ತಿವೆ ಅವಕಾಶಗಳ ಭಂಡಾರ | Sreeleela

ವಿಜಯವಾಣಿ - 2025-01-30T103338.165
Published on

ಬೆಂಗಳೂರು: ಕನ್ನಡ ಚಿತ್ರರಂದಲ್ಲಿ ತನ್ನ ಮುದ್ದಾದ ನಗು, ಜಬರ್ದಸ್​ ಕುಣಿತದಿಂದಲೇ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿರುವ 'ಕಿಸ್' ಸಿನಿಮಾದ​ ಬೆಡಗಿ, ನಟಿ ಶ್ರೀಲೀಲಾ (Sreeleela), ಕನ್ನಡದಲ್ಲಿ 'ಕಿಸ್'​, 'ಭರಾಟೆ', 'ಬೈಟು ಲವ್'​ ಚಿತ್ರಗಳಲ್ಲಿ ಅಭಿನಯಿಸಿ, ತದನಂತರ ಟಾಲಿವುಡ್​ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡದಿಂದ ನೇರವಾಗಿ ತೆಲುಗು ಅಂಗಳಕ್ಕೆ ಜಿಗಿದ ಶ್ರೀಲೀಲಾ, ಒಂದಲ್ಲ, ಎರಡಲ್ಲ ಹಲವು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡರು. ತೆಲುಗಿನ ಸ್ಟಾರ್​ ನಟರೊಂದಿಗೆ ನಟಿಸಿದ ಶ್ರೀಲೀಲಾ, 2024ರಲ್ಲಿ ಸೋಲು-ಗೆಲುವಿನ ರುಚಿಯನ್ನು ಸಮವಾಗಿ ಕಂಡಿದ್ದಾರೆ. ಈಗ ತಮಿಳಿನತ್ತ ಮುಖಮಾಡಿರುವ 'ಕಿಸ್ಸಿಕ್​' ಬ್ಯೂಟಿ, ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಪಾವಧಿಯಲ್ಲಿಯೇ ಅಪಾರ ಖ್ಯಾತಿಗಳಿಸಿರುವ ಕನ್ನಡ ನಟಿ ಶ್ರೀಲೀಲಾ, ಕಳೆದ ವರ್ಷ ಹಲವಾರು ಬಿಗ್ ಬಜೆಟ್ ತೆಲುಗು ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರೇಕ್ಷಕರಿಗೆ ಮತ್ತಷ್ಟು ಚಿರಪರಿಚಿತರಾದರು. ತೆಲುಗಿನ ನಂತರ ಈಗ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಕಿಸ್​ ಬೆಡಗಿ, ತಮ್ಮ ಮೊದಲ ತಮಿಳು ಚಿತ್ರದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಿನಿ ವರದಿಯೊಂದು ತಿಳಿಸಿದೆ. ಸುಧಾ ಕೊಂಗರ ನಿರ್ದೇಶನದ "ಪರಾಶಕ್ತಿ" ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ, ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನಾಗಿ ತಮ್ಮ 25ನೇ ಸಿನಿಮಾದಲ್ಲಿ ಮಿಂಚಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್​ ಹಾಗೂ ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿತು. ಮದ್ರಾಸ್‌ನಲ್ಲಿ ಹಿಂದಿನ ಯುಗದಲ್ಲಿ ನಡೆದ ಪರಾಶಕ್ತಿ ಹಾಗೂ ವಿದ್ಯಾರ್ಥಿ ರಾಜಕೀಯವನ್ನು ಈ ಚಿತ್ರ ತೋರಿಸಲಿದೆ. ಸದ್ಯ ರಿಲೀಸ್​ಗೆ ಸಿದ್ಧವಾಗಿರುವ 'ಪರಾಶಕ್ತಿ'ಗೂ ಮುನ್ನವೇ ಶ್ರೀಲೀಲಾ ಮತ್ತೊಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಕನ್ನಡದ ನಟಿಗೆ ಇತರೆ ಚಿತ್ರರಂಗದಿಂದ ಹಲವಾರು ಅವಕಾಶಗಳು ಹುಡುಕಿ ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net