

ಬೆಂಗಳೂರು: ಸಿನಿಮಾ ನಟ ನಟಿಯರು ಸುದ್ದಿಯಲ್ಲಿ ಸದಾ ಇರುತ್ತಾರೆ. ನಟಿ ಶ್ರೀಲೀಲಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ನೆರವಾಗಿದ್ದಾರೆ. ದತ್ತು ಪಡೆದಿದ್ದು ಹೇಗೆ ಎನ್ನುವ ಇಂಟ್ರಸ್ಟಿಂಗ್ ಸ್ಟೋರಿ ನೋಡೋಣ..
ಈ ಹಿಂದೆ 'ಬೈ ಟು ಲವ್' ಚಿತ್ರದಲ್ಲಿ ಮಗುವಿನ ಜೊತೆ ಶ್ರೀಲೀಲಾ ನಟಿಸಿದ್ದಾರೆ. ಆ ಮಗುವಿನೊಂದಿಗೆ ಶ್ರೀಲೀಲಾಗೆ ಬಂಧ ಬೆಸೆದಿತ್ತಂತೆ. ಜೊತೆಗೆ ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿನ ಮಕ್ಕಳನ್ನು ಕಂಡೊಡನೆ ಶ್ರೀಲೀಲಾ ಅಕ್ಷರಶಃ ಭಾವುಕರಾಗಿ ಇಬ್ಬರು ಮಕ್ಕಳನ್ನ ದತ್ತು ಪಡೆಯುವ ನಿರ್ಧಾರ ಮಾಡಿದ್ದರು. ಜೊತೆಗೆ ಆಶ್ರಮದಲ್ಲಿ ಮಕ್ಕಳೊಂದಿಗೆ ಶ್ರೀಲೀಲಾ ಹೆಚ್ಚು ಸಮಯ ಕಳೆದ ನಂತರ ಮಕ್ಕಳನ್ನು ದತ್ತು ಪಡೆಯುವ ನಿರ್ಧಾರಕ್ಕೆ ಬಂದಿದ್ದರಂತೆ.
ದತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದಾಗಿ ಹೇಳಿಕೊಂಡಿದ್ದಾರೆ. ಇಬ್ಬರು ಮಕ್ಕಳ ಬಾಳಿಗೆ ದೀಪ ಹಚ್ಚಿದ್ದಾರೆ. ಶ್ರೀ ಮನೋವಿಕಾಸ ಕೇಂದ್ರದಿಂದ ಮಕ್ಕಳನ್ನು ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಎಲ್ಲರೂ ಸುಂದರವಾಗಿರುವ, ಆರೋಗ್ಯವಾಗಿರುವ ಮಕ್ಕಳನ್ನೇ ದತ್ತು ಪಡೆಯಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೆ ಶ್ರೀಲೀಲಾ, ದಿವ್ಯಾಂಗ ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ಮಾದರಿಯಾಗಿದ್ದಾರೆ. ಆಶ್ರಮದಿಂದ ಇಬ್ಬರು ಮಕ್ಕಳನ್ನು ನಟಿ ದತ್ತು ಸ್ವೀಕಾರ ಮಾಡಿದ್ದಾರೆ. ಅದರಲ್ಲಿ ಗುರು ಎಂಬ ಮಗು ಕೇವಲ 8 ತಿಂಗಳ ಮಗು. ಈ ಪುಟ್ಟ ಕಂದನ ಜೊತೆಗೆ, ಶೋಭಿತಾ ಎನ್ನುವ ಹೆಣ್ಣು ಮಗುವನ್ನು ಕೂಡ ಅವರು ದತ್ತು ಪಡೆದುಕೊಂಡಿದ್ದಾರೆ. ಇದಪ್ಪಾ ರಿಯಲ್ ಹೀರೋಯಿನ್ ಲಕ್ಷಣ ಎಂದಿದ್ದಾರೆ ಜನ.
ಕನ್ನಡದ ನಟಿ ಶ್ರೀಲೀಲಾ ಅವರು ಸದ್ಯ ಸಾಲು, ಸಾಲು ಸಿನಿಮಾಗಳ ಮೂಲಕ ಸುದ್ದಿಯಲ್ಲಿ ಇದ್ದಾರೆ. ನಟಿ ಶ್ರೀಲೀಲಾ ತೆರೆಯ ಮೇಲೆ ಮಾತ್ರ ಅಲ್ಲ ನಿಜ ಜೀವನದಲ್ಲೂ ಕೂಡ ಹೀರೋಯಿನ್ ಆಗಿದ್ದಾರೆ.