ಇಂಡಿಯಾ ಮೈತ್ರಿಕೂಟದಲ್ಲಿ ಒಡಕು?

ವಿಜಯವಾಣಿ (8)
Published on

ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಐಎನ್​ಡಿಐಎ ಮೈತ್ರಿಕೂಟದ ಪೋಸ್ಟರ್ ಬಾಯ್ಗಳಾಗಿ ಗಮನ ಸೆಳೆದದ್ದು ಮಾತ್ರವಲ್ಲ, ಉತ್ತರಪ್ರದೇಶದಲ್ಲಿ ಬಿಜೆಪಿಯ ಹಲವು ಕ್ಷೇತ್ರಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಚುನಾವಣೆ ಮುಗಿದು ಆರು ತಿಂಗಳಷ್ಟೇ ಆಗಿದೆ. ಆಗಲೇ ಐನ್​ಡಿಐಎ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಹುಲ್, ಅಖಿಲೇಶ್ ಭಿನ್ನ ಹಾದಿ ಹಿಡಿದಿದ್ದಾರೆ. ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭೆ ಉಪ ಚುನಾವಣೆ ಫಲಿತಾಂಶದಿಂದ ಉತ್ಸಾಹದಲ್ಲಿರುವ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಐಎನ್​ಡಿಐಎ ಮೈತ್ರಿಕೂಟದ ನೇತೃತ್ವ ವಹಿಸಿಕೊಳ್ಳಲು ಸಿದ್ಧ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

| ರವೀಂದ್ರ ಎಸ್. ದೇಶಮುಖ್

ಅದು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭ. ಲೋಕಸಭೆಯಲ್ಲಿ ಪ್ರತಿಪಕ್ಷಗಳಿಗೆ ಮೀಸಲಾದ ಆಸನಗಳ ಮೊದಲ ಸಾಲಿನಲ್ಲೇ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಸೀನರಾಗಿದ್ದರು. ಅಷ್ಟೇ ಅಲ್ಲ, ಅಯೋಧ್ಯೆಯಿಂದ ಮೊದಲ ಬಾರಿ ಸಂಸದರಾದ ಎಸ್​ಪಿಯ ಅವಧೇಶ್ ಪ್ರಸಾದ್ ಇದೇ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ರಾಹುಲ್ ಭಾಷಣದ ವೇಳೆ ಅಖಿಲೇಶ್, ಅಖಿಲೇಶ್ ಭಾಷಣದ ವೇಳೆ ರಾಹುಲ್ ಮೇಜು ಕುಟ್ಟಿದ್ದು ನೋಡಿ ಇವರ ರಾಜಕೀಯ ಕೆಮೆಸ್ಟ್ರಿ ಸಂಚಲನ ಉಂಟು ಮಾಡಲಿದೆ ಎಂಬ ವಿಶ್ಲೇಷಣೆಗಳು ಹರಿದಾಡಿದ್ದವು. ಕಾಲಕ್ರಮೇಣ ರಾಹುಲ್ ಗಾಂಧಿ ಧೋರಣೆ, ರಾಜಕೀಯ ಎಳಸುತನ, ಕಲಾಪವನ್ನು ನಡೆಯಲು ಬಿಡದಿರುವುದು, ಅದಾನಿ ಬಿಟ್ಟರೆ ಬೇರೆ ವಿಷಯ ಪ್ರಸ್ತಾಪಿಸದೆ ಇರುವುದು ಇದೆಲ್ಲವೂ ಸಮಾಜವಾದಿ ಪಕ್ಷದ ನಾಯಕರಿಗೆ ಮುಜುಗರ ಸೃಷ್ಟಿಸಿತಲ್ಲದೆ, ಇದರಿಂದ ತಮ್ಮ ಪಕ್ಷದ ವರ್ಚಸ್ಸಿಗೂ ಹಾನಿ ಎಂದರಿತು, ಒಂದಿಷ್ಟು ಅಂತರ ಕಾಯ್ದುಕೊಳ್ಳ ತೊಡಗಿದರು.

ಮೊನ್ನೆ ಡಿಸೆಂಬರ್ 3ರಂದು ಸಂಸತ್ತಿನ ಚಳಿಗಾಲ ಅಧಿವೇಶನಕ್ಕೆ ಅಖಿಲೇಶ್ ಯಾದವ್ ಆಗಮಿಸುತ್ತಿದ್ದಂತೆ ಗಲಿಬಿಲಿಗೊಂಡರು. ಲೋಕಸಭೆಯ 8ನೇ ಬ್ಲಾಕ್​ನಲ್ಲಿ ರಾಹುಲ್ ಗಾಂಧಿ ಸಮೀಪದಲ್ಲೇ ಇದ್ದ ಅವರ ಆಸನವನ್ನು 6ನೇ ಬ್ಲಾಕ್​ಗೆ ಬದಲಿಸಲಾಗಿತ್ತು. ಬದಲಾದ ಆಸನ ವ್ಯವಸ್ಥೆಯನ್ನು ಕಂಡು ಸಿಡಿಮಿಡಿಗೊಂಡ ಅಖಿಲೇಶ್ ವ್ಯಂಗ್ಯವಾಗಿಯೇ ‘ಧನ್ಯವಾದ ಕಾಂಗ್ರೆಸ್’ ಎಂದು ಉದ್ಗರಿಸಿದರು. ಈ ಅಸಮಾಧಾನದ ಹೊಗೆಯ ವಾಸನೆ ಹತ್ತುತ್ತಿದ್ದಂತೆ ಕಾಂಗ್ರೆಸ್​ನ ವೇಣುಗೋಪಾಲ್ ಅಖಿಲೇಶರ ಬಳಿ ಬಂದು ರಾಹುಲ್ ಆಸನದ ಬಳಿ ಇದ್ದ ಮೊದಲಿನ ಆಸನದಲ್ಲೇ ಕುಳಿತುಕೊಳ್ಳಲು ವಿನಂತಿಸಿದರಾದರೂ, ‘ನೋ, ಥ್ಯಾಂಕೂ’ ಎಂಬ ಉತ್ತರದಲ್ಲೇ ಅಖಿಲೇಶ್ ಹಲವು ಸಂದೇಶ ರವಾನಿಸಿದರು. ಅದಾನಿ ವಿಷಯವನ್ನಿಟ್ಟುಕೊಂಡು ಸದನವನ್ನು ನಡೆಯಲು ಬಿಡದ ಕಾಂಗ್ರೆಸ್ ಧೋರಣೆ, ಈ ಅಸಮಾಧಾನದ ಅಗ್ನಿಗೆ ತುಪ್ಪ ಸುರಿದಂತಾಗಿದೆ.

ರಾಹುಲ್ ರಾಜಕೀಯ ಧೋರಣೆ ಬಗ್ಗೆಯೂ ಅತೃಪ್ತಿ ಇದೆ. ‘ಇನ್ ಶೆಹಜಾದೋಂಕಿ ಫ್ಲಾಪ್ ಫಿಲ್ಮ ಬಹುತ್ ದಿನ್ ನಹೀ ಚಲೇಗಿ’ (ಈ ಇಬ್ಬರು ರಾಜಕುಮಾರರ ಫ್ಲಾಫ್ ಸಿನಿಮಾ ತುಂಬ ದಿನ ನಡೆಯುವುದಿಲ್ಲ) ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹಲವು ಬಾರಿ ಹೇಳಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಾದುನೋಡುವ ತಂತ್ರ

ಚಳಿಗಾಲ ಅಧಿವೇಶನದ ವೇಳೆಯೂ ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ, ಪ್ರಮುಖ ಸಮಸ್ಯೆಗಳ ಬಗ್ಗೆ ದನಿ ಎತ್ತುವಲ್ಲಿ ವಿಫಲವಾದರೆ ಸಮಾಜವಾದಿ ಪಕ್ಷ ಭಿನ್ನ ಹಾದಿ ಹಿಡಿಯುವ ಸಾಧ್ಯತೆ ಇದೆ. ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಕಾದು ನೋಡುವ ತಂತ್ರಕ್ಕೆ ಸಮಾಜವಾದಿ ಪಕ್ಷ ಮೊರೆ ಹೋಗಿದೆಯಾದರೂ, ರಾಹುಲ್ ರಾಜಕೀಯ ವರ್ತನೆ ಎಸ್​ಪಿ ನಾಯಕರಲ್ಲಿ ಬೇಸರ ಮೂಡಿಸಿದೆ. ಶನಿವಾರವಷ್ಟೇ, ಮಹಾರಾಷ್ಟ್ರದ ಮಹಾ ಅಘಾಡಿಯಿಂದ ಎಸ್​ಪಿ ಹೊರಬಿದ್ದಿದ್ದು, ಐನ್​ಡಿಐಎ ಒಕ್ಕೂಟದಿಂದಲೂ ನಿರ್ಗಮಿಸಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಗಳಿಸಿದ್ದು ಕೂಡ ಕಾಂಗ್ರೆಸ್ ಮೇಲಿನ ಮಿತ್ರಪಕ್ಷಗಳ ಅಸಮಾಧಾನ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಬದಲಾವಣೆಯ ಕೂಗಿಗೆ ಮಮತಾ ಜೈಕಾರ

ಈ ಬೆಳವಣಿಗೆಗಳ ಮಧ್ಯೆಯೇ, ಐಎನ್​ಡಿಐಎ ಮೈತ್ರಿಕೂಟದ ನೇತೃತ್ವವನ್ನು ಕಾಂಗ್ರೆಸ್ ಹೊರತುಪಡಿಸಿ ಮೈತ್ರಿಕೂಟದ ಬೇರೆ ಪಕ್ಷ ವಹಿಸಿಕೊಳ್ಳಬೇಕು ಎಂಬ ಕೂಗು ಎದ್ದಿದೆ. ಸಂಖ್ಯಾಬಲದಲ್ಲೂ ಕಾಂಗ್ರೆಸ್ 99 ಸೀಟುಗಳನ್ನು ಹೊಂದಿದ್ದರೆ, ಐಎನ್​ಡಿಐಎ ಮಿತ್ರಪಕ್ಷಗಳು 135 ಸ್ಥಾನಗಳನ್ನು ಹೊಂದಿವೆ. ‘ಐನ್​ಡಿಐಎ ಮೈತ್ರಿಕೂಟ ಸ್ಥಾಪಿಸಿದ್ದೇ ನಾನು. ಪಶ್ಚಿಮ ಬಂಗಾಳದಿಂದಲೇ ನಾನು ಈ ಮೈತ್ರಿಕೂಟವನ್ನು ಮುನ್ನಡೆಸಲು, ನೇತೃತ್ವ ವಹಿಸಿಕೊಳ್ಳಲು ಸಿದ್ಧ’ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು, ಇಂಡಿಯಾ ಒಕ್ಕೂಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಮತಾ ಹೇಳಿಕೆಯನ್ನು ಶಿವಸೇನೆ (ಉದ್ಧವ್ ಬಣ) ಹಾಗೂ ಸಮಾಜವಾದಿ ಪಕ್ಷ ಬೆಂಬಲಿಸಿವೆ. ಅಂದರೆ, ಮೈತ್ರಿಕೂಟದ ನೇತೃತ್ವವನ್ನು ಕಾಂಗ್ರೆಸ್​ನಿಂದ ಕಸಿದುಕೊಂಡು, ತಾವು ವಹಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಪ್ರಾದೇಶಿಕ ಪಕ್ಷಗಳ ಹಲವು ನಾಯಕರಲ್ಲಿ ಗರಿಗೆದರಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ತನ್ನ ಶಕ್ತಿ ಮತ್ತು ಲೋಕಸಭಾ ಸ್ಥಾನಗಳನ್ನು ವೃದ್ಧಿಸಿಕೊಂಡಿರುವುದರಿಂದ, ಅಖಿಲೇಶ್ ಕೂಡ ಈ ರೇಸ್​ನ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ನಡುವಿನ ಮುನಿಸು ಇದೇ ರೀತಿ ಮುಂದುವರಿದರೆ, ಐಎನ್​ಡಿಐಎ ಒಕ್ಕೂಟದಲ್ಲಿ ಒಡಕು ಮೂಡುವುದು ನಿಶ್ಚಿತ ಹಾಗೂ ನೇತೃತ್ವ ಬದಲಾವಣೆಯ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.

ಸ್ಥಾನ ಹಂಚಿಕೆ ಸೂತ್ರ

ಇದರ ಪರಮೋಚ್ಚ ಅಧಿಕಾರ ಇರುವುದು ಲೋಕಸಭಾ ಅಧ್ಯಕ್ಷರ ಬಳಿಯೇ. ಲೋಕಸಭಾ ಕಾರ್ಯಾ ಲಯದ ನಿಯಮಾವಳಿ ಪ್ರಕಾರ ಆಸನ ಹಂಚಿಕೆ ಮಾಡಲಾಗುತ್ತದೆ. ಸಾಮಾನ್ಯ ಶಿಷ್ಟಾಚಾರದ ಪ್ರಕಾರ ಎನ್​ಡಿಎ ಮೈತ್ರಿಕೂಟ ಪಕ್ಷಗಳ ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸುವ ಹೊಣೆಗಾರಿಕೆ ಬಿಜೆಪಿಯದ್ದಾಗಿದ್ದರೆ, ಐನ್​ಡಿಐಎ ಒಕ್ಕೂಟದಲ್ಲಿ ಇದರ ಜವಾಬ್ದಾರಿ ಕಾಂಗ್ರೆಸ್​ಗೆ ಇದೆ. ‘ಕಾಂಗ್ರೆಸ್ ಮಿತ್ರಪಕ್ಷಗಳನ್ನು ನಿರ್ಲಕ್ಷಿಸುತ್ತಿದೆ’ ಎಂಬ ಆರೋಪ ಮಿತ್ರಪಕ್ಷಗಳಿಂದ ಜೋರುದನಿಯಲ್ಲಿ ಕೇಳಿಬಂದಿರುವುದು ಇದೇ ಕಾರಣಕ್ಕೆ.

ಆಸನ ಹಂಚಿಕೆಯ ಬಗ್ಗೆ ಮುನಿಸು ಎದ್ದಿರುವ ಸಂದರ್ಭದಲ್ಲೇ ಲೋಕಸಭೆಯಲ್ಲಿ ಸೀಟೀಂಗ್ ವ್ಯವಸ್ಥೆ ಹೇಗಿರುತ್ತದೆ ಎಂಬುದನ್ನು ಅರಿಯೋಣ.

  • ಲೋಕಸಭೆಯಲ್ಲಿ ಒಟ್ಟು 8 ಬ್ಲಾಕ್ ಹಾಗೂ 12 ಸಾಲುಗಳಿವೆ. ಮೊದಲ ಸಾಲಿನಲ್ಲಿ ಒಟ್ಟು 20 ಆಸನಗಳಿವೆ.
  • ಲೋಕಸಭೆಯಲ್ಲಿ ಆಡಳಿತ ಪಕ್ಷ ಅಥವಾ ಮೈತ್ರಿಕೂಟದ ಸಂಸದರು ಸ್ಪೀಕರ್ ಅವರ ಬಲಬದಿಯಲ್ಲಿ (ರೈಟ್ ಸೈಡ್) ಆಸೀನರಾಗುತ್ತಾರೆ ಮತ್ತು ಪ್ರತಿಪಕ್ಷಗಳ ಸಂಸದರು ಎಡಬದಿಯಲ್ಲಿ (ಲೆಫ್ಟ್ ಸೈಡ್) ಆಸೀನರಾಗುತ್ತಾರೆ.
  • ಹೊಸ ಸೀಟೀಂಗ್ ವ್ಯವಸ್ಥೆಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬ್ಲಾಕ್ 1ರ ಸೀಟ್ ನಂಬರ್ 1ನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸೀಟ್ ನಂಬರ್ 2 (ಪ್ರಧಾನಿ ಪಕ್ಕದಲ್ಲಿ), ಗೃಹ ಸಚಿವ ಅಮಿತ್ ಷಾ ಅವರಿಗೆ ಸೀಟ್ ನಂಬರ್ 3, ರಸ್ತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ನಂಬರ್ 4 ಆಸನ ನೀಡಲಾಗಿದೆ. ಗಡ್ಕರಿ ಮುಂಚೆ 58ನೇ ಸಂಖ್ಯೆಯ ಆಸನದಲ್ಲಿದ್ದರು.
  • ಪ್ರಧಾನಿ ನರೇಂದ್ರ ಮೋದಿ ಅವರ ಎದುರಿಗೆ 8ನೇ ಬ್ಲಾಕ್ ಇದ್ದು, ಇದರ ಮೊದಲ ಸಾಲಿನಲ್ಲಿ ರಾಹುಲ್ ಗಾಂಧಿ (ಆಸನ ಸಂಖ್ಯೆ 498) ಅವರಿಗೆ ಸ್ಥಾನ ನೀಡಲಾಗಿದೆ. ರಾಹುಲ್ ಗಾಂಧಿ ಅವರ ಬಳಿ ಕಾಂಗ್ರೆಸ್​ನ ಕೆಸಿ ವೇಣುಗೋಪಾಲ್ ಹಾಗೂ ಡಿಎಂಕೆಯ ಟಿ.ಆರ್. ಬಾಲು ಅವರಿಗೆ ಆಸನ ಕಲ್ಪಿಸಲಾಗಿದೆ.
  • ಲೋಕಸಭೆಯಲ್ಲಿ 8ನೇ ಬ್ಲಾಕ್ ಪ್ರಮುಖವಾದದ್ದು. ಏಕೆಂದರೆ, ಇದು, ಪ್ರಧಾನಿ ಮತ್ತು ಸ್ಪೀಕರ್ ಅವರ ನೇರ ಎದುರಿಗೆ ಇರುತ್ತದೆ. ಕಲಾಪದ ನೇರಪ್ರಸಾರದ ವೇಳೆಯಲ್ಲೂ 8ನೇ ಬ್ಲಾಕ್​ನ್ನು ಫೋಕಸ್ ಮಾಡಲಾಗುತ್ತದೆ. ಇದೇ ಬ್ಲಾಕ್​ನ ಮೊದಲ ಸಾಲಿನಲ್ಲಿ ಮೊದಲು ಅಖಿಲೇಶ್ ಮತ್ತು ಅವಧೇಶ್ ಸಿಂಗ್ ಸ್ಥಾನ ಪಡೆದಿದ್ದರು.
  • ವಯನಾಡ್​ನಿಂದ ಇತ್ತೀಚೆಗಷ್ಟೇ ಲೋಕಸಭೆ ಪ್ರವೇಶಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ 8ನೇ ಬ್ಲಾಕ್​ನ 4ನೇ ಸಾಲಿನಲ್ಲಿ (ಆಸನ ಸಂಖ್ಯೆ 517) ಸ್ಥಾನ ನೀಡಲಾಗಿದೆ.
  • ರಾಹುಲ್ ಗಾಂಧಿ ಜತೆ ಕುಳಿತುಕೊಳ್ಳುತ್ತಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಈಗ 6ನೇ ಬ್ಲಾಕ್​ನ ಆಸನ ಸಂಖ್ಯೆ 355ನ್ನು ನೀಡಲಾಗಿದೆ. ಅಖಿಲೇಶ್ ಪತ್ನಿ ಇದೇ ಸಾಲಿನ 358ನೇ ಆಸನ ಪಡೆದುಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಾಧ್ಯಾಯ ಆಸನ ಸಂಖ್ಯೆ 354ರಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್ ಜತೆ 8ನೇ ಬ್ಲಾಕ್​ನ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್ 6ನೇ ಬ್ಲಾಕ್​ನ ಸೀಟ್ ನಂ. 357ಕ್ಕೆ ಶಿಫ್ಟ್ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net