ಚಿನ್ಮಯ ಮೂರ್ತಿಯಲ್ಲಿ ಆಧ್ಯಾತ್ಮಿಕ ಸ್ಪೂರ್ತಿ

Ramakrishna paramahamsa
Published on
ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಎಂದಾಕ್ಷಣ ನಮಗೆ, ದೇವತಾ ಮೂರ್ತಿಗಳಲ್ಲಿ ಜಾಗೃತಮೂರ್ತಿಯನ್ನು ಕಂಡು ಅನುಭವಿಸುತ್ತ ಪರಮಾನಂದ ಸಾಗರದಲ್ಲಿ ತೇಲಿ ಮುಳುಗುತ್ತಿದ್ದ ದೇವಮಾನವರು ಎಂಬುದು ಅರಿವಿಗೆ ಬರುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ತಾಯಿ ವಿಶಾಲಾಕ್ಷಿ ದೇವಿಯ ಮಂದಿರದಲ್ಲಿ ಪಡೆದ ಸಮಾಧಿಯ ಘಟನೆ ನಿಜಕ್ಕೂ ಆಶ್ಚರ್ಯಕರ. ಅವರಿಗೆ ಶ್ಯಾಮ, ಶ್ಯಾಮಾ ಎಲ್ಲವೂ ಕೇವಲ ಪೂಜಾ ವಿಗ್ರಹವಾಗಿರದೆ ಜಾಗೃತ ಶಕ್ತಿಯ ಸಾಕಾರ ರೂಪವಾಗಿ ಗೋಚರಿಸುತ್ತಿದ್ದ ವಿಚಾರವನ್ನು ಅಚ್ಚರಿ ಹುಟ್ಟಿಸುವಂಥದು.

ಅದೊಂದು ಘಟನೆ. ದಕ್ಷಿಣೇಶ್ವರದಲ್ಲಿ ಹೇಗೆ ಭವತಾರಿಣಿಯ ಮಂದಿರವಿದೆಯೋ ಅದೇ ತೆರನಾಗಿ ರಾಧಾಕಾಂತನ ಮಂದಿರವೂ ಇದೆ. ಒಮ್ಮೆ ಪೂಜಾ ಕೈಂಕರ್ಯಗಳನ್ನು ಮುಗಿಸಿದ ಅರ್ಚಕ ರಾಧಾಕಾಂತನ ಮೂರ್ತಿಯನ್ನು ಹೊತ್ತು ಇಡುವ ಸಮಯದಲ್ಲಿ ಕೈಜಾರಿ ಮೂರ್ತಿಯ ಒಂದು ಕಾಲು ಭಿನ್ನವಾಯಿತು. ತಕ್ಷಣ ಮತ್ತೊಂದು ಮೂರ್ತಿಯನ್ನು ಅಣಿಮಾಡಿಸಲು ಏರ್ಪಾಡಾಯಿತು. ಈ ಸಂದರ್ಭದಲ್ಲಿ ರಾಮಕೃಷ್ಣರಿಗೆ ಈ ವಿಚಾರ ತಿಳಿದು ರಾಧಾಕಾಂತನ ವಿಗ್ರಹವನ್ನು ತರಿಸಿ ಅದನ್ನು ಅತ್ಯಂತ ಚಾಕಚಕ್ಯತೆಯಿಂದ ಸೂಕ್ಷ್ಮವಾಗಿ ಕಾಲಿನ ಭಾಗವನ್ನು ಮತ್ತೆ ಜೋಡಿಸಿದ ರಾಮಕೃಷ್ಣರು ಪೂರ್ಣವಾಗಿ ವಿಗ್ರಹ ಎಂದಿನಂತೆ ಮಾಡಿದಾಗ ದೇವಾಲಯದಲ್ಲಿದ್ದ ಅನೇಕರು ಕಾಲು ಭಿನ್ನವಾದ ಸ್ಥಳವನ್ನು ಎಷ್ಟು ಹುಡುಕಿದರೂ ಕಂಡು ಹಿಡಿಯಲಾಗಲಿಲ್ಲವಂತೆ. ರಾಮಕೃಷ್ಣರ ಈ ಕಾರ್ಯವನ್ನು ಎಲ್ಲರೂ ಮೆಚ್ಚಿದಾಗ್ಯೂ ಕೆಲವರ ಮಾತು ಪರಮಹಂಸರ ಕಿವಿಗೆ ಬಿತ್ತು. ಆಗ ಅವರು ನುಡಿದ ಮತ್ತು ನೀಡಿದ ಉದಾಹರಣೆಗೆ ಎಲ್ಲರೂ ತತ್ತರಿಸಿ ಹೋದರು. ಪರಮಹಂಸರು ನುಡಿದ ಮಾತುಗಳಿವು: ‘ಒಂದು ವೇಳೆ ರಾಣಿ ರಾಸಮಣಿಯ ಅಳಿಯನಾದ ಮಧುರನಾಥ ವಿಶ್ವಾಸನ ಕಾಲು ಯಾವುದೋ ಕಾರಣಕ್ಕೆ ಮುರಿದು ಹೋದರೆ ಅಳಿಯನನ್ನೇ ಬದಲಾಯಿಸುತ್ತಾರೆಯೋ?’ ಎಂಬ ಮಾತಿಗೆ ಯಾವುದೇ ಉತ್ತರ ನೀಡದೆ ಮೂಕವಿಸ್ಮಿತರಾದರು ಆಕ್ಷೇಪಣೆ ಮಾಡಿದ ಸಿಬ್ಬಂದಿ. ಇದು ಪರಮಹಂಸರು ಜಗತ್ತಿಗೆ ತೋರಿದ ಸರಳ ಮತ್ತು ಅತ್ಯಂತ ಹೃದಯರ್ಸ³ ವಿಚಾರ.

ಈ ಪ್ರಪಂಚದಲ್ಲಿ ದೇವತಾಮೂರ್ತಿಗಳಿಗೆ ಕಡಿಮೆಯಿಲ್ಲ. ಅದರಲ್ಲಿಯೂ ಬಗೆ ಬಗೆಯ ಶ್ರೀಕೃಷ್ಣನ ಮೂರ್ತಿಗಳಂತೂ ವ್ಯಾಪಿಸಿಕೊಂಡಿವೆೆಯಾದರೂ ಆ ಪಾವನಮೂರ್ತಿಯಲ್ಲಿ ಪರಮಾನಂದವನ್ನು ಅನುಭವಿಸುವವರು ವಿರಳ. ರಾಮಕೃಷ್ಣರು ಅತ್ಯಂತ ಸುಂದರ ಹಾಗೂ ಅನಿರ್ವಚನೀಯ ಆನಂದವನ್ನು ತರುವ ಉದಾಹರಣೆಗಳ ಮೂಲಕ ಭಗವಂತನ ಇರುವಿಕೆಯನ್ನು ವಿವರಿಸುತ್ತಿದ್ದರು. ಅದೇ ಶ್ರದ್ಧೆ. ಮಗುವಿನಲ್ಲಿರುವ ಶ್ರದ್ಧೆಯನ್ನು ನಾವು ಬೆಳೆಸಿಕೊಳ್ಳಬೇಕು ಎನ್ನುತ್ತಿದ್ದರು. ನಾವು ಏನೇ ಅರ್ಚನೆ, ವ್ರತ, ಸೇವೆಗಳನ್ನು ಕೈಗೊಂಡರೂ ಶ್ರದ್ಧೆ ಇಲ್ಲದೆ ಏನೂ ಸಾಧ್ಯವಿಲ್ಲ ಎಂದು ಭೋಧಿಸುತ್ತಿದ್ದರು. ಅದಕ್ಕೆ ಅವರು ಜಟಿಲ ಎಂಬ ಹುಡುಗ ಕಾಡಿನ ಮೂಲಕ ಶಾಲೆಗೆ ಹೋಗಿ ಬರುತ್ತಿದ್ದ ಕತೆ ಹೇಳುತ್ತಿದ್ದರು. ಭಯ ವಿಹ್ವಲನಾದ ಆತನಿಗೆ ಭಯವಾದಾಗ ಅಣ್ಣ ಮಧುಸೂದನನ್ನು ಕರೆ ಎಂದು ತಾಯಿ ತಿಳಿಸಿದ್ದಳು. ಬಾಲಕನಿಗೆ ಎಲ್ಲಿಲ್ಲದ ಧೈರ್ಯ ಬಂದಿತು. ಇದಾದ ನಂತರ ಒಂದು ದಿನ ಬಾಲಕ ಎಂದಿನಂತೆ ಶಾಲೆಗೆ ಹೋಗುವಾಗ ಎಲ್ಲಿಲ್ಲದ ಭಯ ಅವನಿಗೆ ಉಂಟಾಯಿತು. ತಾಯಿ ತಿಳಿಸಿದ ರೀತಿಯಲ್ಲಿ, ಅಣ್ಣ ಮಧುಸೂದನನನ್ನು ಕರೆದು ಆರ್ತನಾದ ಮಾಡಿದ. ಉತ್ತರ ಬರಲಿಲ್ಲ. ಮತ್ತೆ ಮತ್ತೆ ಕರೆದಾಗ ಮಧುಸೂದನ ಬಂದು ‘ನೋಡು ನಾನಿಲ್ಲಿದ್ದೇನೆ, ಭಯಪಡಬೇಡ’ ಎಂದು ನುಡಿದ. ಕಾಶಿ ಪಿತಾಂಬರ, ಕೈಯಲ್ಲಿ ಕೊಳಲು, ಶಿರದಲ್ಲಿ ಸುಂದರ ನವಿಲುಗರಿ ಹಾಗೂ ವಡ್ಯಾಣ, ಕಂಕಣಗಳಿಂದ ರಾರಾಜಿಸುತ್ತಿದ್ದ ಭಗವಾನ್ ಶ್ರೀಕೃಷ್ಣ ಈ ಮುದ್ದುಬಾಲಕನ ಆರ್ತನಾದಕ್ಕೆ ಮಾರು ಹೋಗಿ ಪ್ರತ್ಯಕ್ಷನಾಗಿ, ಪ್ರತಿದಿನ ಶಾಲೆಗೆ ಬಿಡುತ್ತಿದ್ದನಂತೆ. ಇಲ್ಲಿ ನಾವು ಮುಖ್ಯವಾಗಿ ನೋಡಬೇಕಾಗಿರುವುದು ಬಾಲಕನಲ್ಲಿ ತಾಯಿಯ ಮಾತಿನ ಮೇಲೆ ಇರುವ ಅಪ್ಪಟ ಶ್ರದ್ಧೆ. ಈ ಶ್ರದ್ಧೆಯೇ ಬಾಲಕನಿಗೆ ಶ್ರೀಕೃಷ್ಣನ ದರ್ಶನ ಭಾಗ್ಯವಷ್ಟೇ ಅಲ್ಲದೆ ಜತೆಗಾರನಾಗಿರುವ ಅದೃಷ್ಟವನ್ನೂ ನೀಡಿತು.

ಇನ್ನು ಜನಸಾಮಾನ್ಯರು ಪ್ರತಿನಿತ್ಯ, ಪ್ರತಿಕ್ಷಣ ಪರಮಾತ್ಮನ ಹೆಸರು, ನಾಮಸ್ಮರಣೆ, ಸಂಕೀರ್ತನೆ ಇತ್ಯಾದಿಗಳನ್ನು ಮಾಡಿದರೂ ಆ ಭಗವಂತನ ದರ್ಶನ ಭಾಗ್ಯ ದೊರೆಯುತ್ತಿಲ್ಲ. ಏಕೆಂದರೆ ಇಲ್ಲಿ ಕೇವಲ ಬಾಹ್ಯಾಡಂಬರ, ಸ್ವಾರ್ಥ, ಕೀರ್ತಿ ಇತ್ಯಾದಿಗಳಲ್ಲಿಯೇ ಮುಳುಗಿರುವಾಗ ಭಗವಂತನ ದಿವ್ಯ ದರುಶನವಾದರೂ ಹೇಗೆ ದೊರೆಯುತ್ತದೆ? ಇಲ್ಲಿ ಪರಮಹಂಸರು ಭೋಧಿಸಿದಂತೆ ಆ ಪುಟ್ಟ ಬಾಲಕನಿಗಿರುವ ಶ್ರದ್ಧೆ ಶೂನ್ಯವಾಗಿ ಹೋಗಿದೆ.

ಶ್ರದ್ಧೆ ಅತ್ಯಂತ ಮುಖ್ಯ. ಅದು ನಮ್ಮ ನಮ್ಮ ಹೃದಯಾಂತರಾಳದಿಂದ ಹೊರಬರಬೇಕು. ಹೃದಯ ಶುದ್ಧವಾಗಿದ್ದಲ್ಲಿ ಮಾತ್ರ ಶ್ರದ್ಧೆ ತಾನಾಗಿಯೇ ವ್ಯಕ್ತವಾಗುತ್ತದೆ. ಪೂಜೆ, ವ್ರತ, ಅರ್ಚನೆ ಇತ್ಯಾದಿಗಳೆಲ್ಲಾ ಶ್ರದ್ಧೆಯಿಂದ ಆಚರಿಸಲ್ಪಟ್ಟಾಗಲೇ ಭಗವದ್ದರ್ಶನ ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net