

ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನಿರ್ದಿಷ್ಟಪಡಿಸದ ಶಸ್ತ್ರಚಿಕಿತ್ಸಾ ಪ್ಯಾಕೇಜ್ (Unspecified Surgical Package) ಅಡಿಯಲ್ಲಿ ಬೆನ್ನುಮೂಳೆ ವಿರೂಪ (Spinal Deformities) ಚಿಕಿತ್ಸಾತ್ಮಕ ಕಾರ್ಯವಿಧಾನಗಳನ್ನು ಸೇರ್ಪಡೆಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಆರೋಗ್ಯ ಇಲಾಖೆ ಪ್ರಸ್ತಾವನೆ ಮೇರೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಯೋಜನೆಯಡಿ ಬೆನ್ನುಮೂಳೆ ವಿರೂಪ (ಸ್ಕೋಲಿಯೋಸಿಸ್, ಕೈಫೋಸಿಸ್, ಲಾಡೋಸಿಸ್ ಇತ್ಯಾದಿ)ಗಳ ಕಾರ್ಯವಿಧಾನಗಳನ್ನು ಸೇರ್ಪಡೆ ಮಾಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST)ಮುಖಾಂತರ ಚಿಕಿತ್ಸಾತ್ಮಕ ಸೇವೆಗಳನ್ನು ಒದಗಿಸಲು ಷರತ್ತುಬದ್ಧ ಅನುಮೋದನೆ ನೀಡಲಾಗಿದೆ.
ಚಿಕಿತ್ಸಾ ವಿಧಾನಗಳಿಗೆ ತಜ್ಞ ವೈದ್ಯರ ಸಮಿತಿ ಶಿಫಾರಸು ಅನ್ವಯ ಪ್ರತಿ ಶಸ್ತ್ರಚಿಕಿತ್ಸೆಗೆ 1.5 ಲಕ್ಷ ರೂ. ನಿಗದಿಪಡಿಸಲಾಗಿದೆ. ಪ್ಯಾಕೇಜ್ ಹಾಗೂ ದರ ನಿಗದಿಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಿದೆ. ಸದರಿ ಚಿಕಿತ್ಸಾ ವಿಧಾನಗಳಿಗೆ ಗುಣಮಟ್ಟದ ಸೇವೆ ಒದಗಿಸಲು ಮಾರ್ಗಸೂಚಿಯ ಕಡ್ಡಾಯ ಪಾಲನೆ ಮಾಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ನೋಂದಾಯಿಸಿಕೊಳ್ಳಬೇಕಿದೆ. ಪ್ರಸ್ತುತ ವಿಧಾನಗಳಂತೆ ಈಗ ಪ್ರಸ್ತಾಪಿಸಲಾಗಿರುವ ಚಿಕಿತ್ಸಾ ವಿಧಾನಗಳಿಗೆ ಸರ್ಕಾರಿ ಆಸ್ಪತ್ರೆಗಳಿಗೆ ಅನುಮೋದಿತ ಪ್ಯಾಕೇಜ್ ದರದ ಶೇ. 75 ಅನ್ನು ಬಜೆಟ್ನಿಂದ ಒದಗಿಸಲಾಗದ ಅನುದಾನದಿಂದ ಪಾವತಿಸಬೇಕಿದೆ. ಪ್ಯಾಕೇಜ್ ಅಡಿ ಚಿಕಿತ್ಸಾ ಕ್ರಮಗಳನ್ನು ಸೇರಿಸುವ ಅಥವಾ ಕೈಬಿಡುವ ಸಂದರ್ಭ ಉಂಟಾದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದೆ. ಇದರೊಂದಿಗೆ ಒಟ್ಟು 1,650 ಚಿಕಿತ್ಸಾ ವಿಧಾನಗಳಿಗೆೆ ಅನುಮತಿ ದೊರೆತಂತಾಗಿದೆ.
ಗುತ್ತಿಗೆಯಡಿ ದಂತ ವೈದ್ಯರ ನೇಮಕ: ಆಯುಷ್ಮಾನ್ ಯೋಜನೆಯಡಿ ರಾಜ್ಯದ ಎಂಟು ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ಚಿಕಿತ್ಸಾ ಸೌಲಭ್ಯ ಅನುಷ್ಠಾನಗೊಳಿಸಿ, ಗುತ್ತಿಗೆ ಆಧಾರದಲ್ಲಿ ದಂತ ವೈದ್ಯರ ನೇಮಕಕ್ಕೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಆದೇಶ ಹೊರಡಿಸಿದ್ದಾರೆ. ಬಾಗಲಕೋಟೆಯ ಮುಧೋಳ ತಾಲೂಕು ಆಸ್ಪತ್ರೆ ಮತ್ತು ಗುಳೇದಗುಡ್ಡದ ಸಮುದಾಯ ಆರೋಗ್ಯ ಕೇಂದ್ರ, ಬೆಳಗಾವಿಯ ಮೂಡಳಿ, ಬೀದರ್ನ ಹುಲುಸೂರು, ತುಮಕೂರಿನ ತಿರುಮಣಿ, ವಿಜಯಪುರದ ತಾಳಿಕೋಟೆ ಮತ್ತು ಆಲ್ಮೇಲ್, ಯಾದಗಿರಿಯ ಕೊಡಲ್ಕಲ್ನ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಲಾ ಒಬ್ಬರಂತೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಂಡು, ಅವರ ವೇತನವನ್ನು ಎಬಿಎಆರ್ಕೆ ಅನುದಾನದಿಂದ ಭರಿಸುವಂತೆ ಸೂಚಿಸಲಾಗಿದೆ.
ದಂತ ಚಿಕಿತ್ಸಾ ಕಾರ್ಯವಿಧಾನಗಳನ್ನು ಹಾಗೂ ಅವುಗಳ ದರವನ್ನು ಎಬಿಎಆರ್ಕೆ ಅಡಿ ಸೇರ್ಪಡೆ ಮಾಡಲು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಬೇಕು. ಈ ಎಂಟು ಆಸ್ಪತ್ರೆಗಳಲ್ಲಿ ಕಾಯಂ ದಂತ ವೈದ್ಯರು ವರದಿ ಮಾಡಿಕೊಂಡಲ್ಲಿ ಗುತ್ತಿಗೆ ವೈದ್ಯರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಿದೆ. ಆರೋಗ್ಯ ಇಲಾಖೆಯು ಒಟ್ಟು 11 ದಂತ ವೈದ್ಯರ ನೇಮಕಾತಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಪೈಕಿ ಮೂರು ವೈದ್ಯರಿಗೆ ಸ್ಥಳ ನಿಯುಕ್ತಿ ಗೊಳಿಸಿರುವ ಹಿನ್ನೆಲೆಯಲ್ಲಿ 8 ವೈದ್ಯರ ನೇಮಕಾತಿಗೆ ಅನುಮತಿ ನೀಡಲಾಗಿದೆ.