ನೈಟ್​ ಶಿಫ್ಟ್​ ಮುಗಿಸಿ ಮನೆಗೆ ತೆರಳುತ್ತಿದ್ದವರ ಮೇಲೆ ಮೃತ್ಯವಿನಂತೆ ಬಂದೆರಗಿದ ಮರ್ಸಿಡೀಸ್​..!

Car
Published on

ಚಂಡೀಗಢ: ವೇಗವಾಗಿ ಬಂದ ಮರ್ಸಿಡೀಸ್​ ಕಾರು ಸೈಕಲ್​ ಸವಾರರು ಹಾಗೂ ಆಫೀಸ್​ ಕ್ಯಾಬ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಪಂಜಾಬ್​ನ ಮೊಹಾಲಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಭಾನುವಾರ ವರದಿಯಾಗಿದ್ದು, ಮೂವರಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕಪ್ಪು ಬಣ್ಣದ ಮರ್ಸಿಡೀಸ್​ ಕಾರು ಚಂಡೀಗಢ ನೋಂದಣಿ ಸಂಖ್ಯೆಯನ್ನು ಹೊಂದಿದೆ.

ಕಾರಿನ ನಿಯಂತ್ರಣ ಕಳೆದುಕೊಂಡು ಚಾಲಕ ಕ್ಯಾಬ್​ಗೆ ಡಿಕ್ಕಿ ಹೊಡೆಯುವ ಮುನ್ನ ಸೈಕಲ್​ ಸವಾರರಿಬ್ಬರಿಗೆ ಡಿಕ್ಕಿ ಹೊಡೆದನು. ಕೊನೆಗೆ ಕಾರು ಕಬ್ಬಿಣದ ಸರಪಳಿಗೆ ಹೋಗಿ ಸಿಲುಕಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.

ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕ್ಯಾಬ್​ನಲ್ಲಿದ್ದವರನ್ನು ಮೊಹಾಲಿಯ ರಾಧಾ ಸೋಮಿ ಚೌಕ್​ನಲ್ಲಿರುವ ಕಚೇರಿಯೊಂದರ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಮೂವರು ಮೃತಪಟ್ಟಿರುವುದಲ್ಲದೆ, ಇತರೆ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಪಾಳಿಯ ಉದ್ಯೋಗಿಗಳನ್ನು ಮನೆಗೆ ಡ್ರಾಪ್​ ಮಾಡಲು ತೆರಳಿದ್ದಾಗ ಈ ಅವಗಢ ಸಂಭವಿಸಿದೆ.

ಮರ್ಸಿಡೀಸ್​ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಆದರೆ, ಏರ್​ ಬ್ಯಾಗ್​ನಿಂದಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೊಂದು ವಾಹನದಲ್ಲಿ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net